ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತ್ಯಾಗ ಬಲಿದಾನಗಳ ಸಂಕೇತ ಬಕ್ರಿದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ದಾವಣಗೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಎಂಟು ಗಂಟೆಗೆ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡ ಮುಸ್ಲಿಂರು ಸಕಲ ಜೀವರಾಶಿಗಳಿಗೂ ಸುಖ, ಶಾಂತಿ ಕರುಣಿಸಿ ಸಮೃದ್ದವಾಗಿ ಮಳೆ ಬೆಳೆ ನೀಡಿ ರೈತಾಪಿ ವರ್ಗಕ್ಕೆ ನೆಮ್ಮದಿ ಸಿಗಲಿ ಎಂದು ಅಲ್ಲಾನಲ್ಲಿ ಪ್ರಾರ್ಥಿಸಿದರು.
ಶ್ವೇತ ವಸ್ತ್ರಧಾರಿಗಳಾಗಿದ್ದ ಮುಸ್ಲಿಂರು ತಲೆ ಮೇಲೆ ಬಿಳಿ ಟೋಪಿಗಳನ್ನು ಧರಿಸಿ ಪ್ರಾರ್ಥನೆಯಲ್ಲಿ ತೊಡಗಿದರೆ. ಇನ್ನು ಕೆಲವರು ಕರವಸ್ತ್ರವನ್ನು ತಲೆಗೆ ಸುತ್ತಿಕೊಂಡಿದ್ದರು.
ಮನೆಯಿಂದಲೆ ಚಾಪೆ, ಜಮಕಾನ ತೆಗೆದುಕೊಂಡು ಮೈದಾನದಲ್ಲಿ ಹಾಸಿಕೊಂಡು ಪ್ರಾರ್ಥಿಸಿದರು. ಮಕ್ಕಳಿಂದ ಹಿಡಿದು ದೊಡ್ಡವರು ಪ್ರಾರ್ಥನೆಯಲ್ಲಿ ತೊಡಗಿ ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು.
ಗಾಂಧಿವೃತ್ತದ ನಾಲ್ಕು ಕಡೆಗಳಲ್ಲಿಯೂ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಹಾಗೂ ದಾವಣಗೆರೆ ರಸ್ತೆಯ ಸಂಚಾರಿ ಪೊಲೀಸ್ ರಾಣೆ ಹತ್ತಿರ ರಸ್ತೆಗೆ ಬ್ಯಾರಿಕೇಡ್‌ಗಳನ್ನಿಟ್ಟು ವಾಹನಗಳ ಸಂಚಾರವನ್ನು ನಿಯಂತ್ರಿಸಲಾಯಿತು.
ವಕ್ಫ್ ಮಂಡಳಿ ಮಾಜಿ ಚೇರ್ಮನ್ ಇಕ್ಬಾಲ್ ಹುಸೇನ್, ನಗರಸಭೆ ಮಾಜಿ ಉಪಾಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಮುಸ್ಲಿಂ ಮುಖಂಡರುಗಳಾದ ಟಿಪ್ಪುಖಾಸಿಂ ಆಲಿ, ಅಬ್ದುಲ್ಲಾ ಚಾಂದ್‌ಪೀರ್, ಎಂ.ಕೆ.ತಾಜ್‌ಪೀರ್, ಜಮೀರ್, ಜಾಮಿಯಾ ಮಸೀದಿ ಮುತುವಲ್ಲಿ ಸಾಧಿಕ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮುಸ್ಲಿಂರು ಪ್ರಾರ್ಥನೆಯಲ್ಲಿದ್ದರು.