ಬಮುಲ್ ಚುನಾವಣೆಯಲ್ಲಿ ದಳದ ಅಭ್ಯರ್ಥಿ ಹುಸ್ಕೂರ್ ಆನಂದ್ ಗೆಲುವು ಖಚಿತ-ಮುನೇಗೌಡ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮುಂಬರುವ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಒಮ್ಮತ ಅಭ್ಯರ್ಥಿಯಾಗಿ ಹುಸ್ಕೂರ್ ಆನಂದ್ ರವರನ್ನು ಆಯ್ಕೆ ಮಾಡಿದ್ದೇವೆ. ಜೊತೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಎಂಪಿಸಿಎಸ್ ಗಳಲ್ಲಿ ದಳದ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ. ಆದರಿಂದ ಈ ಬಾರಿ ದಳದ ಅಭ್ಯರ್ಥಿ ಹುಸ್ಕೂರ್ ಆನಂದ್ ಗೆಲುವು ಖಚಿತವೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಹೇಳಿದ್ದಾರೆ.

        ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮುನೇಗೌಡ ಮಾತನಾಡಿ ಕೆಲವರು ತಾಲೂಕಿನಲ್ಲಿ ದಳ ಅಸ್ತಿತ್ವದಲ್ಲಿಲ್ಲಾ ಎಂದು ಮೂದಲಿಸಿದ್ದರು. ಮೇಲಾಗಿ ಕಳೆದ ಬಮುಲ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಅಪ್ಪಯ್ಯಣ್ಣನವರಿಗೆ ಕೆಲವರು ಸಾಕಷ್ಟು ತೊಂದರೆ ಕೊಟ್ಟಿದ್ದರು. ಈಗಲೂ ಸಹ ನಮ್ಮ ಅಭ್ಯರ್ಥಿ ಹುಸ್ಕೂರ್ ಆನಂದ್ ರವರು ಸ್ಪರ್ಧೆಗಿಳಿಯದಂತೆ ಇನ್ನಿಲ್ಲದ ಕಿರುಕುಳ ಕೊಟ್ಟಿದ್ದಾರೆ. ಆದರೆ ಕೋರ್ಟಿನಿಂದ ಆದೇಶ ತಂದು ಹುಸ್ಕೂರ್ ಆನಂದ್ ಸ್ಪರ್ದಿಸಿದ್ದಾರೆ. ಆ ವ್ಯಕ್ತಿಗಳು ಯಾರೆಂದು ಎಲ್ಲರಿಗೂ ಗೊತ್ತು.

ಅಲ್ಲದೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಶಾಸಕರು ನಮ್ಮ ರಾಜ್ಯ ವರಿಷ್ಠರ ಜೊತೆ ಚರ್ಚಿಸದೆ ಏಕಾ ಏಕಿ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಮೈತ್ರಿ ಧರ್ಮ ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ತಾಲೂಕಿನಲ್ಲಿ ದಳದ ನಾಯಕರನ್ನು ಕಡೆಗಣಿಸಿದ್ದಾರೆ. ಈಗ ಬಿಜೆಪಿ ಅಭ್ಯರ್ಥಿ ಬಿ. ಸಿ. ಆನಂದ್ ಸ್ಪರ್ಧೆಗೆ ಸಾಕಷ್ಟು ತೊಡಕುಗಳಿವೆ. ಒಂದು ವೇಳೆ ಅವರು ಆಯ್ಕೆಯಾದರೆ ಅವರ ಆಯ್ಕೆ ಅಸಿಂಧುವಾಗುವ ಸಂಭವವಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕದೆ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಹುಸ್ಕೂರ್ ಆನಂದ್ ರವರ ಗೆಲುವು ನಿಚ್ಚಳವಾಗಿದೆ ಎಂದು ಮುನೇಗೌಡರು ಹೇಳಿದರು.

       ರಾಜ್ಯ ದಳದ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ ದೊಡ್ಡಬಳ್ಳಾಪುರದಲ್ಲಿ ಯಾವುದೇ ಚುನಾವಣೆ ನಡೆದರು ದಳದ ವಿಶೇಷ ಪಾತ್ರ ವಹಿಸುತ್ತದೆ. ಈ ಹಿಂದೆ ಬಮುಲ್ ಚುನಾವಣೆಯಲ್ಲಿ ಅಪ್ಪಯ್ಯಣ್ಣನವರಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಈ ಬಗ್ಗೆ ದಳದ ಕಾರ್ಯಕರ್ತರಲ್ಲಿ ಸಾಕಷ್ಟು ಬೇಸರವಿದೆ. ಈ ನೋವಿನಿಂದ ಹೊರಬರಲು ಹುಸ್ಕೂರ್ ಆನಂದ್ ರವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿಸಿದ್ದೇವೆ ಆನಂದ ರವರ ಸ್ಪರ್ಧೆಗೆ ತೊಂದರೆ ಕೊಟ್ಟವರು ಯಾರೆಂದು ಗೊತ್ತು. ತಾಲೂಕಿನ ಜೆಡಿಎಸ್ ನಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ. ಎಲ್ಲರೂ ಕೈ ಜೋಡಿಸಿ ದಳದ ಅಭ್ಯರ್ಥಿ ಹುಸ್ಕೂರ್ ಆನಂದ್ ರವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಬೆಂಬಲ ಸಹ ದೊರೆಯುವ ನಿರೀಕ್ಷೆ ಇರುವುದರಿಂದ ಹುಸ್ಕೂರ್ ಆನಂದ್ ಗೆಲ್ಲುವ ಸಾಧ್ಯತೆಗಳಿವೆ ಎಂದು ಹರೀಶ್ ಗೌಡರು ಹೇಳಿದರು.

     ಬಮುಲ್ ನಿರ್ದೇಶಕ ಸ್ಥಾನದ ಅಭ್ಯರ್ಥಿ ಹುಸ್ಕೂರ್ ಆನಂದ್ ಮಾತನಾಡಿ ಕೆಲವರು ಉದ್ದೇಶ ಪೂರಕವಾಗಿ ನನ್ನ ಮೇಲೆ ಎಂಟು ಕೇಸುಗಳನ್ನು ಹಾಕಿಸಿ ತೊಂದರೆ ಕೊಟ್ಟಿದ್ದಾರೆ. ಹಾಗಾಗಿ ಕೋರ್ಟಿನಿಂದ ಆದೇಶ ತಂದಿದ್ದೇನೆ. ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡರು, ಪಕ್ಷದ ಮುಖಂಡರು ಕಾರ್ಯಕರ್ತರು ಎಲ್ಲರೂ ನೀವೇ ಸೂಕ್ತ ಅಭ್ಯರ್ಥಿ ಎಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ಮೇಲಾಗಿ ಸ್ಪರ್ಧಾಕಾಂಕ್ಷಿಗಳಾಗಿ ನಾಮ ಪತ್ರ ಸಲ್ಲಿಸಿದ್ದ ಅಶ್ವಥ್ ನಾರಾಯಣ್ ಹಾಗೂ ನಾರಾಯಣಪ್ಪನವರು ನಾಮಪತ್ರ ವಾಪಾಸ್ ಪಡೆದು ನನಗೆ ಬೆಂಬಲ ನೀಡಿದ್ದಾರೆ. ನಾನು ಅಭ್ಯರ್ಥಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲಾ ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗೆ ಸಹಕರಿಸುತ್ತಿದ್ದಾರೆ. ಅಧಿಕಾರ ಸಿಕ್ಕರೆ ಸಾಕಷ್ಟು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿದ್ದೇನೆ ಎಂದು ಆನಂದ್ ಹೇಳಿದರು.

     ಸುದ್ದಿ ಗೋಷ್ಠಿಯಲ್ಲಿ ದಳದ ಹಿರಿಯ ಮುಖಂಡ ಕುರುವಿಗೆರೆ ನರಸಿಂಹಯ್ಯ, ರಾಜ್ಯ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಡಾ. ವಿಜಯ್ ಕುಮಾರ್, ಮಹಿಳಾ ಜಿಲ್ಲಾಧ್ಯಕ್ಷೆ ದೇವರಾಜಮ್ಮ, ನಗರ ಅಧ್ಯಕ್ಷೆ ಶಾಂತಮ್ಮ ಮುಖಂಡರಾದ ಜಗನ್ನಾಥಾಚಾರ್, ವಕೀಲ ಸತೀಶ್, ವಕ್ತಾರೆ ಶಶಿಕಲಾ, ಕಂಚಿಗನಾಳ ಲಕ್ಷ್ಮೀನಾರಾಯಣ, ಅಶ್ವಥ್ ನಾರಾಯಣ್, ನಾರಾಯಣಪ್ಪ, ನಾಗರಾಜ್, ಕೊಡಿಗೇಹಳ್ಳಿ ಕೆಂಪೇಗೌಡ, ರಾಜ್ ಗೋಪಾಲ್, ರಂಗಸ್ವಾಮಿ, ಸಿದ್ದಪ್ಪ ಮುಂತಾದವರು ಭಾಗವಹಿಸಿದ್ದರು.

 

 

- Advertisement - 
Share This Article
error: Content is protected !!
";