ಕೆಮ್ಮಿನ ಸಿರಪ್‌ಗಳ ಮಾರಾಟ ಮತ್ತು ಖರೀದಿ ನಿಷೇಧ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಮ್ಮಿನ ಸಿರಪ್​​​ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 12 ಮಕ್ಕಳು ಸಾವನ್ನಪ್ಪಿದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ಶ್ರೀಸನ್ ಫಾರ್ಮಾ ಮತ್ತು ಕೇಸನ್ಸ್ ಫಾರ್ಮಾ ಪೂರೈಸುವ ಕೆಮ್ಮಿನ ಸಿರಪ್‌ಗಳ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ರಾಜ್ಯ ಪರವಾನಗಿ ಪ್ರಾಧಿಕಾರ ಮತ್ತು ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್‌ಅವರು ಈ ಬಗ್ಗೆ ಸುತ್ತೋಲೆ ಹೊರಡಿಸಿ ತಮಿಳುನಾಡಿನ ಕಾಂಚೀಪುರಂ ಮೂಲದ ಶ್ರೀಸನ್ ಫಾರ್ಮಾ ತಯಾರಿಸಿದ ಕೋಲ್ಡ್‌ ರಿಫ್ ಸಿರಪ್ಮತ್ತು ಜೈಪುರದ ಕೇಸನ್ಸ್ ಫಾರ್ಮಾ ತಯಾರಿಸಿದ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಸಿರಪ್ಗಳ ಮಾರಾಟ ಮತ್ತು ಖರೀದಿಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಈ ಸಿರಪ್‌ಗಳು ಮಧ್ಯಪ್ರದೇಶ (ಎಂಪಿ) ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.

- Advertisement - 

ಜಿಲ್ಲಾ ಆರೋಗ್ಯ ಅಧಿಕಾರಿಗಳು, ವೈದ್ಯಕೀಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು, ಔಷಧ ಸಂಗ್ರಹಕಾರರು (ಡ್ರಗ್ ಸ್ಟಾಕಿಸ್ಟ್‌ಗಳು), ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಈ ಕೆಮ್ಮಿನ ಸಿರಪ್‌ಗಳ ಖರೀದಿಯನ್ನು ಮತ್ತು ಮಾರಾಟವನ್ನು ತಡೆಯಲು ಜಾಗರೂಕರಾಗಿರುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಯಾವುದೇ ಸ್ಟಾಕ್ ಲಭ್ಯವಿದ್ದಲ್ಲಿ, ಅದನ್ನು ಹಿಂಪಡೆಯಲು ಮತ್ತು ಹೆಚ್ಚಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಕಚೇರಿಗೆ ಮಾಹಿತಿ ನೀಡುವಂತೆಯೂ ಸಹ ಅವರಿಗೆ ಸೂಚಿಸಲಾಗಿದೆ.

- Advertisement - 

ಸಚಿವಾಲಯವು ರಾಜ್ಯದಲ್ಲಿ ಮಾರಾಟವಾಗುತ್ತಿರುವ ಅದೇ ರಿತಿಯ ಎಲ್ಲಾ ಕೆಮ್ಮಿನ ಸಿರಪ್‌ಗಳ ಮಾದರಿಗಳ ಪ್ರಯೋಗಾಲಯ ಪರೀಕ್ಷೆ ಮತ್ತು ವಿಶ್ಲೇಷಣೆಗೆ ಆದೇಶಿಸಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕುರಿತು ಮಾತನಾಡಿ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‌ಗಳು ರಾಜ್ಯಕ್ಕೆ ಸರಬರಾಜಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಪರೀಕ್ಷಿಸುವಂತೆ ಇಲಾಖೆ ಆದೇಶಿಸಿದೆ. ವಾಸ್ತವವಾಗಿ, ಈ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಔಷಧಿಗಳು ಮತ್ತು ಮಾತ್ರೆಗಳ ಕಲಬೆರಕೆ ಪ್ರಕರಣಗಳನ್ನು ನಿಭಾಯಿಸಲು ಕಟ್ಟುನಿಟ್ಟಿನ ಕಾನೂನುಗಳ ಅವಶ್ಯಕತೆ ಒತ್ತಿಹೇಳಿದ ಗುಂಡೂರಾವ್ ಅವರು, ಕಲಬೆರಕೆ ಮತ್ತು ಕಳಪೆ ಔಷಧಗಳು ಹಾಗೂ ಅವುಗಳ ಪರಿಶೀಲನೆಯ ಬಗ್ಗೆ ರಾಜ್ಯಗಳ ನಡುವೆ ಮಾಹಿತಿ ಹಂಚಿಕೆ ಖಚಿತಪಡಿಸಿಕೊಳ್ಳಲು ಒಂದು ವ್ಯವಸ್ಥೆ ಜಾರಿಗೆ ತರುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ಸರ್ಕಾರ ಈ ಸಲಹೆ ಪರಿಗಣಿಸಿ ಮಾಹಿತಿ ಹಂಚಿಕೆಗೆ ಒಂದು ವ್ಯವಸ್ಥೆ ರೂಪಿಸಬೇಕು ಎಂದು ಸಚಿವರು ತಿಳಿಸಿದರು.

 

 

 

 

 

Share This Article
error: Content is protected !!
";