ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಬಾನು ಮುಷ್ತಾಕ್ ಅವರೇ ದಸರಾ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ಸಾರಿಗೆ ಮತ್ತು ಮುಜುರಾಯಿ ಸಚಿವರಾದ ರಾಮಲಿಂಗರೆಡ್ಡಿ ಹೇಳಿದರು. ಬಾನು ಮುಷ್ತಾಕ್ ರ ಆಯ್ಕೆ ಬಗ್ಗೆ ಸಿಎಂ ಮತ್ತು ಡಿಸಿಎಂ ತಮ್ಮ ನಿರ್ಧಾರದಲ್ಲಿ ಅಚಲತೆ ಹೊಂದಿದ್ದಾರೆ ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಚಾಮುಂಡೇಶ್ವರಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಹಿಂದೂಗಳಿಗೆ ಸೇರಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿಯವರಿಗೆ ಜಾತಿ ರಾಜಕಾರಣದ ಚೇಷ್ಟೆ ಮಾಡದಿದ್ದರೆ ಅವರಿಗೆ ನಿದ್ದೆ ಬರಲ್ಲ ಎಂದು ಕಿಡಿಕಾರಿದರು.
ಚಾಮುಂಡೇಶ್ವರಿ ಪ್ರಾಧಿಕಾರ ಅಧಿಕೃತ ಹೌದೋ ಅಲ್ಲವೋ ಎಂಬುದನ್ನು ಕೋರ್ಟ್ ತಿರ್ಮಾನಿಸುತ್ತದೆ. ದಸರಾ ನಾಡಹಬ್ಬ ನಾಡಿನ ಏಳು ಕೋಟಿ ಜನರಿಗೆ ಸೇರಿರುವ ಹಬ್ಬವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಕಾಲದಲ್ಲಿ ಅಬ್ದುಲ್ ಕಲಾಂ ಅವರನ್ನು ಆಹ್ವಾನಿಸಿದ್ದರು. ಈ ಹಿಂದೆ ಕವಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು. ಆಗ ಬಿಜೆಪಿಯವರು ಕುಂಕುಮ ಹಚ್ಚಿಕೊಂಡು ಬನ್ನಿ ಎಂದಿದ್ರಾ ಎಂದು ಪ್ರಶ್ನಿಸಿದರು.
ಅವರವರ ಧರ್ಮ ಅವರಿಗೆ ಶ್ರೇಷ್ಠ, ಯಾವುದೇ ಧರ್ಮವನ್ನು ಯಾರು ದ್ವೇಷಿಸಬಾರದು. ಮತಕ್ಕಾಗಿ ಬಿಜೆಪಿಯವರು ಏನು ಬೇಕಾದರೂ ಮಾಡ್ತಾರೆ. ಜನ ನೆಮ್ಮದಿಯಿಂದ ಇರವುದು ಬಿಜೆಪಿಯವರಿಗೆ ಬೇಕಾಗಿಲ್ಲ ಎಂದರು.

