ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆಯ ಬಿಐಇಟಿ ಆವರಣದಲ್ಲಿರುವ ಎಸ್ ಎಸ್ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದ್ದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನ ರಜತ ಮಹೋತ್ಸವ ಸಮಾರಂಭವನ್ನು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿದರು.
ಬಾಪೂಜಿ ಪಾಲಿಟೆಕ್ನಿಕ್ ಕಾಲೇಜುಕಳೆದ ಮೂರು ದಶಕಗಳಿಂದ ವಿದ್ಯಾರ್ಥಿಗಳ ವೃತ್ತಿಜೀವನ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅವರು ತಿಳಿಸಿದರು.
ಸ್ಥಾಪನೆಯಾದ ದಿನದಿಂದಲೂ, ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ವೃದ್ಧಿಸುವುದು, ಕೈಗಾರಿಕೆಗಳೊಂದಿಗೆ ಸಂವಹನ ಬೆಳೆಸುವುದು ಮತ್ತು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವುದು ಇದರ ಮುಖ್ಯ ಧ್ಯೇಯವಾಗಿದೆ.
ಬಾಪೂಜಿ ಪಾಲಿಟೆಕ್ನಿಕ್ ಸಂಸ್ಥೆ, ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ದಾರಿ ತೆರೆದ ಮಹತ್ವದ ಕೇಂದ್ರವಾಗಿದೆ.
ಡಾ.ಶಾಮನೂರು ಶಿವಶಂಕರಪ್ಪಾಜಿಯವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಶಿಸ್ತಿನ ಆಡಳಿತ ಮತ್ತು ಗುಣಮಟ್ಟದ ಶಿಕ್ಷಣದ ಮೂಲಕ ನಿರಂತರವಾಗಿ ಬೆಳೆಯುತ್ತಿದೆ.
ವಿಶಾಲವಾದ ಕಟ್ಟಡ, ಆಧುನಿಕ ಪ್ರಯೋಗಾಲಯಗಳು, ಸಮೃದ್ಧ ಗ್ರಂಥಾಲಯ ಮತ್ತು ಪ್ರಾಯೋಗಿಕ ತರಬೇತಿ ಸೌಲಭ್ಯಗಳು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ದಿಗೆ ನೆರವಾಗುತ್ತಿವೆ ಎಂದು ಸಂಸದೆ ಡಾ.ಪ್ರಭಾ ತಿಳಿಸಿದರು.

