ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಂಕ ಕಡಿತಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಈ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಅಲ್ಲದೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆದು 100ಕ್ಕೆ ಅಂಕಗಳನ್ನ ಇಳಿಕೆ ಮಾಡುವುದು ಬೇಡವೆಂದು ಮನವಿ ಮಾಡಿದ್ದಾರೆ.
ಪತ್ರದ ಸಾರಾಂಶ-
ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕಗಳನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ಅಚ್ಚರಿ ಆಯಿತು.
ಈ ನಿರ್ಧಾರವು ತೀವ್ರ ಖಂಡನೀಯ. ಕನ್ನಡ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿ ಪಡಿಸಿದ ತೀರ್ಮಾನವು ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಆಂದೋಲನದ ಫಲವಾಗಿ ಮೂಡಿ ಬಂದಿತ್ತು. ಕರ್ನಾಟಕ ಸಾಹಿತಿಗಳು, ಕಲಾವಿದರು, ಹೋರಾಟಗಾರರು ನಡೆಸುತ್ತಿದ್ದ ಈ ಚಳುವಳಿಗೆ ಡಾ. ರಾಜಕುಮಾರ್ ಅವರ ನೇತೃತ್ವ ದೊರೆತು ರಾಜ್ಯಾದ್ಯಂತ ತೀವ್ರವಾಗಿ ವ್ಯಾಪಿಸಿದ ಫಲವಾಗಿ ಅಂದಿನ ಶ್ರೀ ಗುಂಡೂರಾವ್ ನೇತೃತ್ವದ ಸರ್ಕಾರವು ಕನ್ನಡ ಪ್ರಥಮ ಭಾಷೆಯನ್ನು ಒಳಗೊಂಡಂತೆ ಮೂರು ಭಾಷೆಗಳಿಗೂ ತಲಾ 100 ಅಂಕ ನಿಗದಿ ಪಡಿಸುವ ಸೂತ್ರವನ್ನು ರೂಪಿಸಿತ್ತು.
ಈ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ದೀರ್ಘ ಚರ್ಚೆ, ಚಿಂತನೆಗಳ ನಂತರ ಕನ್ನಡವೂ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿ ಮಾಡಲಾಯಿತು. ಆಗ ಚಳುವಳಿಯ ಫಲವಾಗಿ ರೂಪುಗೊಂಡ ಈ ಸರ್ವ ಸಮ್ಮತ ನಿರ್ಧಾರವನ್ನು ಈಗ ಬದಲಾಯಿಸಿ 100 ಅಂಕಗಳನ್ನು ನಿಗದಿ ಮಾಡುವುದು ಯಾವ ತರ್ಕ? ಇದರ ಹಿಂದೆ ತರ್ಕವೂ ಇಲ್ಲ. ತತ್ವವೂ ಇಲ್ಲ.
ಇದು ಕನ್ನಡವೂ ಸೇರಿದಂತೆ ಮಾತೃ ಭಾಷೆಗಳ ಮಹತ್ವವನ್ನು ಕುಗ್ಗಿಸುವ ಕೆಲಸ. ಕನ್ನಡ ವಿರೋಧಿ ನಿರ್ಧಾರ. ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬರಗೂರು ರಾಮಚಂದ್ರಪ್ಪ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಸಾರಾಂಶ ಇದಾಗಿದೆ.