ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವಸ್ಥಾನಗಳನ್ನು ನಿರಾಕರಿಸಿ, ದೇವರ ಕಲ್ಪನೆಯನ್ನು ಮನುಷ್ಯನ ಶರೀರಕ್ಕೆ ಸ್ಥಳಾಂತರಗೊಳಿಸಿ, ದೇಹವನ್ನೇ ದೇವಾಲಯವನ್ನಾಗಿ ಮಾಡಿದವರು ಬಸವಣ್ಣನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪುರೋಹಿತಶಾಹಿ ಕಲ್ಪಿಸಿದ ಸ್ವರ್ಗ – ನರಕಾದಿ ಶೋಷಕ ತಂತ್ರಗಳನ್ನು ಧಿಕ್ಕರಿಸಿ ಇಹದ ಬದುಕಿನ ಮೇಲಿನ ಪ್ರೀತಿಯನ್ನು ಮೂಢಿಸಿದ, ಅನೇಕ ಅವೈಚಾರಿಕವಾದ ಆಚರಣೆಗಳನ್ನೂ ಮೂಢನಂಬಿಕೆಗಳನ್ನು ತಿರಸ್ಕರಿಸಿದ, ವೃತ್ತಿಯ ತಾರತಮ್ಯಗಳ ಮೇಲಿನಿಂದ ಮನುಷ್ಯನ ಸಾಮಾಜಿಕ ಅಂತಸ್ತನ್ನು ಪರಿಗಣಿಸದೆ ಕಾಯಕವೆಲ್ಲವೂ ಪೂಜ್ಯವೆಂದು ಸಾರಿದವರು ಬಸವಣ್ಣ ಎಂದು ಸಿಎಂ ಹೇಳಿದರು.
ನಾವಿಂದು ಸಂಘರ್ಷಮಯವಾದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಬಂಧಿಯಾಗಿದ್ದೇವೆ. ನಾಲ್ಕು ದಿಕ್ಕುಗಳಿಂದಲೂ ಹಿಂಸೆ, ಸೇಡು, ಪ್ರತಿಕಾರಗಳ ಘೋಷಣೆಗಳು ಮೊಳಗುತ್ತಿರುವ ಈ ಕಾಲದಲ್ಲಿ ಬಸವಣ್ಣನವರು ನೀಡಿದ್ದ ‘‘ದಯೆಯೇ ಧರ್ಮದ ಮೂಲವಯ್ಯಾ’’ ಎಂಬ ಶಾಂತಿ-ಸೌಹಾರ್ದತೆಯ ಮಂತ್ರವನ್ನು ನಾವೆಲ್ಲರೂ ಮನನ ಮಾಡಿಕೊಳ್ಳಬೇಕಾಗಿದೆ ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.
ಅಂತಹ ಅರಿವಿನ ಬೆಳಕನ್ನು ನಮ್ಮೆಲ್ಲರಲ್ಲಿಯೂ ಬಸವಣ್ಣ ಮೂಡಿಸಲಿ ಎಂದು ಹಾರೈಸುತ್ತೇನೆ. ನಾಡಬಂಧುಗಳಿಗೆ ಬಸವ ಜಯಂತಿಯ ಶುಭಾಶಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.