ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಬಸವೇಶ್ವರರ ಕಾಯಕತತ್ವ ಮನುಕುಲಕ್ಕೆ ಸಾರ್ವಕಾಲಿಕ ಪ್ರೇರಣೆ” ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ನಂಜನಗೂಡಿನ ವಿದ್ಯಾವರ್ಧಕ ಮೈದಾನದಲ್ಲಿಂದು ಸುತ್ತೂರು ಶ್ರೀ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವ –2025 ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಕಾಯಕಯೋಗಿ, ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ, ಬಸವಣ್ಣನವರು ಅಂದಿಗೂ, ಇಂದಿಗೂ, ಎಂದೆಂದಿಗೂ ವಿಶ್ವಗುರುವಾಗಿ ಏಕೆ ನಿಲ್ಲುತ್ತಾರೆ ಎಂದರೆ ಅವರ ಕಾಯಕಕ್ರಾಂತಿ ಅನುಸರಿಸಿದವರು ಸ್ವಾಭಿಮಾನಿಗಳಾಗಿ ಎದ್ದುನಿಲ್ಲುತ್ತಾರೆ, ಜನರ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಸಹ ಬಸವಣ್ಣನವರ ತತ್ವವನ್ನು ಅನುಸರಿಸಿ ಮುನ್ನಡೆಯುತ್ತಿದ್ದು, ವಿಶ್ವಕರ್ಮ, ಮೇಕ್ ಇನ್ ಇಂಡಿಯಾ, ಕೌಶಲ್ಯ ಭಾರತ ಮೊದಲಾದ ಅನೇಕ ಯೋಜನೆಗಳಿಗೆ ಅವರಿಗೆ ಸ್ಫೂರ್ತಿ ನೀಡಿದ್ದು ಬಸವಣ್ಣನವರ ಕಾಯಕ ಕ್ರಾಂತಿ. ಆದ್ದರಿಂದ ನಾವೆಲ್ಲರೂ ಬಸವತತ್ವ ಅನುಸರಿಸಿ, ಸ್ವಾವಲಂಬಿ ಭಾರತ ಹಾಗೂ ಸಮೃದ್ಧ ಕರ್ನಾಟಕಕ್ಕಾಗಿ ದುಡಿಯಬೇಕೆಂಬ ವಿಜಯೇಂದ್ರ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಮಠಗಳ ಪರಮಪೂಜ್ಯ ಜಗದ್ಗುರುಗಳು, ಸಚಿವ ಈಶ್ವರ್ ಖಂಡ್ರೆ, ಶಾಸಕರಾದ ಗಣೇಶ್ ಪ್ರಸಾದ್, ಮಾಜಿ ಶಾಸಕ ಡಾ.ಹರ್ಷವರ್ಧನ್ ಸೇರಿದಂತೆ ಸ್ಥಳೀಯ ಮುಖಂಡರು, ಭಕ್ತಾದಿಗಳು, ಸಮಾಜದ ಬಂಧುಗಳು ಉಪಸ್ಥಿತರಿದ್ದರು.