ಬಸವೇಶ್ವರ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಬಾಣಂತಿ ಸಾವು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬಸವೇಶ್ವರ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾದ ಕಳ್ಳಿಹಟ್ಟಿ ಗ್ರಾಮದ ೨೨ ವರ್ಷದ ಮಹಿಳೆ ಶಾಂತಮ್ಮ ವೈದ್ಯರ ನಿರ್ಲಕ್ಷೆಯಿಂದ ಸಾವನ್ನಪ್ಪಿರುವುದನ್ನು ಖಂಡಿಸಿ ಸಂಬಂಧಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಳ್ಳಿಹಟ್ಟಿ ಗ್ರಾಮದ ಭೋವಿ ಜನಾಂಗಕ್ಕೆ ಸೇರಿದ ಅರುಣ್‌ಕುಮಾರ್ ಎಂಬುವರ ಪತ್ನಿ ಮಾ.೧೩ ರಂದು ಬಸವೇಶ್ವರ ಆಸ್ಪತ್ರೆಗೆ ದಾಖಲಾದಾಗ ಉಚಿತ ಹೆರಿಗೆ ಕ್ಯಾಂಪ್ ಇದೆ ಎಂದು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರು. ೧೮ ರಂದು ಹೆರಿಗೆ ನೋವು ಕಾಣಿಸಿಕೊಂಡಾಗ ಸಹಜ ಹೆರಿಗೆ ಮಾಡಿಸುತ್ತೇವೆಂದು ತಿಳಿಸಿದ ಅಲ್ಲಿನ ವೈದ್ಯರು ಸಿಜೇರಿಯನ್ ಮೂಲಕ ಮಗು ಹೊರಗೆ ತೆಗೆದು ನಂತರ ತಾಯಿಯನ್ನು ಐಸಿಯು ವಾರ್ಡ್‌ಗೆ ಶಿಫ್ಟ್ ಮಾಡುತ್ತೇವೆ. ೨೪ ಗಂಟೆಯೊಳಗೆ ಪ್ರಜ್ಞೆ ಬರುತ್ತದೆ. ಬಳಿಕ ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡುತ್ತೇವೆಂದು ನಮಗೆ ತಿಳಿಸಿದ್ದರು.

ಒಂದು ವಾರವಾದರೂ ಪ್ರಜ್ಞೆ ಬಾರದ ಕಾರಣ ಅನುಮಾನಗೊಂಡು ನೋಡಲು ವಾರ್ಡ್ ಕಡೆ ಹೋದಾಗ ನಮ್ಮನ್ನು ತಡೆದು ದೌರ್ಜನ್ಯವೆಸಗಿ ಪ್ರತಿನಿತ್ಯವೂ ೨೧ ಸಾವಿರ ರೂ.ಗಳ ಮೆಡಿಷಿನ್ ಖರ್ಚು ಬರುತ್ತದೆಂದರು. ಆಗ ನಾವು ಮಂಗಳೂರಿಗೆ ಕರೆದುಕೊಂಡು ಹೋಗುತ್ತೇವೆಂದಾಗ ಮಂಗಳೂರು ವೈದ್ಯರನ್ನು ಇಲ್ಲಿಗೆ ಕರೆಸಿ ಚಿಕಿತ್ಸೆ ಕೊಡಿಸುತ್ತೇವೆಂದು ನಂಬಿಸಿ ಕೊನೆಗೆ ಮಾ.೩೧ ಯುಗಾದಿ ಹಬ್ಬದಂದು ನಮಗೆ ಫೋನ್ ಮಾಡಿದ ವೈದ್ಯರು ಶಾಂತಮ್ಮ ಮೃತಪಟ್ಟಿದ್ದಾಳೆಂದು ಹೇಳಿ ಮಧ್ಯರಾತ್ರಿಯೆ ಹೆಣವನ್ನು ತೆಗೆದುಕೊಂಡು ಹೋಗಿ ಶವಾಗಾರದಲ್ಲಿರಿಸಲು ಆಗುವುದಿಲ್ಲವೆಂದು ಮಾನವೀಯತೆಯಿಲ್ಲದೆ ನಡೆದುಕೊಂಡಿದ್ದಾರೆಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಮ್ಮಳ ಸಾವಿಗೆ ಕಾರಣರಾದ ಬಸವೇಶ್ವರ ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿಯವರ ನಿರ್ಲಕ್ಷೆ ಬಗ್ಗೆ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಂಡು ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸಂಬಂಧಿಕರು ಜಿಲ್ಲಾಡಳಿತದ ಮುಂದೆ ಪಟ್ಟು ಹಿಡಿದರು.

ಗೀತ ಗೋವಿಂದರಾಜು, ಸಂಜೀವಮೂರ್ತಿ, ರಮೇಶ್, ಹಾಲೇಶಪ್ಪ, ಕವಿತ, ರಾಧಮ್ಮ, ಅನಿತ, ಜಯಣ್ಣ, ಹುಲಿಗೆಪ್ಪ, ರಾಜಪ್ಪ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿದ್ದರು.

 

 

Share This Article
error: Content is protected !!
";