ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಮತ್ತು ಎಲ್ಲಾ ಪಕ್ಷಗಳ ಮುಖಂಡರು ನನ್ನ ಹಿಂದಿನ ಆರು ವರ್ಷಗಳ ಪ್ರಾಮಾಣಿಕ ಮತ್ತು ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸಿ ಬಮುಲ್ ಚುನಾವಣೆಯಲ್ಲಿ ಅತ್ಯದಿಕ ಮತಗಳಿಂದ ಜಯಗಳಿಸಲು ಕಾರಣಕರ್ತರಾಗಿದ್ದಾರೆ ಎಂದು ಬಮುಲ್ ನೂತನ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ತಿಳಿಸಿದರು.
ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಸೋಮವಾರ ಮತದಾರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಸ್ಥಳೀಯ ಶಾಸಕ ಧೀರಜ್ ಮುನಿರಾಜು ಹಾಗೂ ತಾಲೂಕಿನ ಪ್ರಾಮಾಣಿಕ ಜೆಡಿಎಸ್ ಮುಖಂಡರು ಕಾರ್ಯಕರ್ತರು ಇಂದಿನ ಗೆಲುವಿಗೆ ಮುಖ್ಯ ಕಾರಣಕರ್ತರಾಗಿದ್ದಾರೆ ಎಂದರು.
ಬಮೂಲ್ ನಿರ್ದೇಶಕರ ಚುನಾವಣೆ ರೈತಾಪಿ ವರ್ಗದ ಚುನಾವಣೆಯಾಗಿದ್ದು, ನನ್ನ ಮುಂದಿನ ಕಾರ್ಯಾವಧಿಯಲ್ಲಿ ಯಾವುದೇ ಪಕ್ಷಪಾತ ಮಾಡದೆ ಮತ್ತಷ್ಟು ಪ್ರಾಮಾಣಿಕತೆಯಿಂದ ತಾಲೂಕಿನ ಪ್ರತಿ ಹಾಲು ಉತ್ಪಾದಕ ಸಂಘಗಳಿಗೆ ಸೇವೆ ಮಾಡುತ್ತೇನೆ. ಮುಖ್ಯವಾಗಿ ಟೆಟ್ರಾ ಪ್ಯಾಕ್ ಘಟಕಕ್ಕೆ ಚಾಲನೆ ನೀಡಲು ಶ್ರಮಿಸಲಾಗುವುದು ಎಂದರು.
ಬೆಂಗಳೂರು ಹಾಲು ಒಕ್ಕೂಟಕ್ಕೆ ದೊಡ್ಡಬಳ್ಳಾಪುರದಿಂದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಬಿಸಿ ಆನಂದ್ ಕುಮಾರ್ ರವರಿಗೆ ನಗರಸಭಾ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ರೈತರಿಗಾಗಿ ಕಟ್ಟಿರುವ ಜೆಡಿಎಸ್ ಪಕ್ಷದಲ್ಲಿ ಆಮಿಷಗಳಿಗೆ ಒಳಗಾಗುವ ಕೆಲ ಮುಖಂಡರಿದ್ದಾರೆ. ಆದರೆ ಪಕ್ಷನಿಷ್ಠೆಯುಳ್ಳು ಮುಖಂಡರು ಹೆಚ್ಚಿನದಾಗಿದ್ದಾರೆ. ತಾಲೂಕಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದ ಬಳಿಕ ಕೆಲ ಜೆಡಿಎಸ್ ಮುಖಂಡರು ನನ್ನ ವಿರುದ್ಧ ಕುತಂತ್ರ ಮಾಡಿದರು. ಈ ಚುನಾವಣೆ ಫಲಿತಾಂಶವು ಅಂತಹ ಕುತಂತ್ರಿಗಳಿಗೆ ತಕ್ಕ ಉತ್ತರ ಕೊಟ್ಟಿದೆ ಎಂದರು.
ತಾಲ್ಲೂಕಿನ ಕಳೆದ ಹತ್ತು ವರ್ಷಗಳ ಕಾಲ ಸದೃಢ ಆಡಳಿತ ನಡೆಸಿದ್ದೇವೆ ಎಂದು ಹೇಳುವ ಕಾಂಗ್ರೆಸ್ ನಾಯಕರು ಪಕ್ಷದಿಂದ ಒಬ್ಬ ಅಭ್ಯರ್ಥಿಯನ್ನು ಹಾಕದೇ ಕುತಂತ್ರಕ್ಕೆ ಮುಂದಾಗಿದ್ದು ಅವರ ಶಕ್ತಿಯನ್ನು ತೋರಿಸುತ್ತದೆ ಎಂದರು.