ಮಕ್ಕಳು ಮತ್ತು ವಯೋವೃದ್ಧರಲ್ಲಿ ಕಂಡು ಬರುವ ಭೇದಿ, ಅತಿಸಾರದ ಬಗ್ಗೆ ಎಚ್ಚರ ಇರಲಿ-ಸಣ್ಣರಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವೇದಾವತಿ ನಗರದ ಉಪಕೇಂದ್ರ ಎಸ್ಎಫ್ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ದಿನಾಚರಣೆಯನ್ನು ಮಂಗಳವಾರ ಮಾಡಲಾಯಿತು.
ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣರಂಗಮ್ಮ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ಕಾರ್ಯಕ್ರಮಗಳು ಮತ್ತು ಪೌಷ್ಟಿಕಾಂಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ಮಕ್ಕಳು, ಮಹಿಳೆಯರಿಗಾಗಿ ಇರುವ ರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ಅಪೌಷ್ಟಿಕತೆ ಇರುವ ಮಕ್ಕಳಿಗೆ ಪೌಷ್ಟಿಕಾಂಶ ಒಳಗೊಂಡ ಆಹಾರವನ್ನು ಸೇವಿಸಬೇಕು ಎಂದು ಸಣ್ಣರಂಗಮ್ಮ ತಿಳಿಸಿದರು.

- Advertisement - 

ಅತಿಸಾರ ಮತ್ತು ಭೇದಿ ಆಗುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಅತಿಸಾರ ಮತ್ತು ಭೇದಿ ಆಗುವ ಸಂದರ್ಭದಲ್ಲಿ ಹೊಟ್ಟೆಯ ಸೆಳೆತ, ವಾಕರಿಕೆ, ಉಬ್ಬುವುದು, ಇತ್ಯಾದಿ ನಡೆಯಲಿವೆ ಎಂದು ಅವರು ತಿಳಿಸಿದರು.

ಅತಿಸಾರ ಮತ್ತು ಭೇದಿ ಎಂದರೆ ಸಡಿಲವಾದ ಅಥವಾ ನೀರಿನಂಶದ ಮಲವನ್ನು ಪದೇ ಪದೇ ಹೊರಹಾಕುವುದು. ಕರುಳಿನ ಸೋಂಕಿನಿಂದ ಉಂಟಾಗುವ ಅತಿಸಾರ ಇದರಲ್ಲಿ ಮಲದಲ್ಲಿ ರಕ್ತ ಅಥವಾ ಲೋಳೆ ರೀತಿಯಲ್ಲಿ ಭೇದಿ ಆಗಲಿದೆ ಎಂದು ಎಚ್ಚರಿಸಿದರು.

- Advertisement - 

ದೇಹದಲ್ಲಿನ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು, ಆಹಾರ ವಿಷ ಅಥವಾ ಕೆಲವು ಔಷಧಿಗಳಿಂದಲೂ ಅತಿಸಾರ ಉಂಟಾಗಿ ನೀರಿನಂಶದ ಮಲ ಆಗಲಿದೆ. ಅತಿಸಾರವು ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ತಾನಾಗಿಯೇ ಕಡಿಮೆಯಾಗುತ್ತದೆ ಆದರೆ ತೀವ್ರವಾದ ಅತಿಸಾರವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಮಕ್ಕಳು ಮತ್ತು ವಯಸ್ಸಾದವರಲ್ಲಿ ಅತಿಸಾರವು ಅಪಾಯಕಾರಿಯಾಗಬಹುದು ಎಂದು ಸಣ್ಣರಂಗಮ್ಮ ಎಚ್ಚರಿಸಿದರು.

ಕರುಳಿನ ಸೋಂಕಿನಿಂದ ಭೇದಿ ಆಗುವ ಸಂಭವ ಇರುತ್ತದೆ. ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಅಥವಾ ಪರಾವಲಂಬಿಗಳಿಂದ ಉಂಟಾಗುತ್ತದೆ. ಭೇದಿಯ ಲಕ್ಷಣಗಳಲ್ಲಿ ಅತಿಸಾರ, ಜ್ವರ, ವಾಕರಿಕೆ, ವಾಂತಿ, ಹೊಟ್ಟೆ ನೋವು, ಮತ್ತು ಮಲದಲ್ಲಿ ರಕ್ತ ಅಥವಾ ಲೋಳೆ ರೀತಿಯ ಭೇದಿ ಆಗಲಿದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಅತಿಸಾರವು ತುಂಬಾ ಸಾಮಾನ್ಯವಾಗಿದೆ ಮತ್ತು ಇದು ಹೆಚ್ಚಾಗಿ ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ನಿಂದ ಉಂಟಾಗುತ್ತದೆ. ಮಕ್ಕಳು ನಿರ್ಜಲೀಕರಣಕ್ಕೆ ಗುರಿಯಾಗುತ್ತಾರೆ ಮತ್ತು ಬೇಗನೆ ಅನಾರೋಗ್ಯಕ್ಕೆ ಒಳಗಾಗಬಹುದು. ಅತಿಸಾರದಿಂದ ಬಳಲುತ್ತಿರುವ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಮತ್ತು ಆಗಾಗ್ಗೆ ಅತಿಸಾರದಿಂದ ಬಳಲುತ್ತಿರುವ ಯಾವುದೇ ಮಗುವಿಗೆ ಮೌಖಿಕ ಪುನರ್ಜಲೀಕರಣ ದ್ರಾವಣಗಳನ್ನು ಬಲವಾಗಿ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದರು.

ಅತಿಸಾರದಿಂದ ಬಳಲುತ್ತಿರುವ 6 ತಿಂಗಳೊಳಗಿನ ಮಕ್ಕಳು ಕೂಡಲೇ ವೈದ್ಯರ ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಮಕ್ಕಳಲ್ಲಿ ಅತಿಸಾರ ವಿರೋಧಿ ಔಷಧಿಗಳು ಬಳಸಲು ಸೂಕ್ತವಲ್ಲ ಎಂದು ಹೇಳಿದರು.

ಪ್ರಾರ್ಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸೌಮ್ಯ ಮಾತನಾಡಿ ಗರ್ಭಿಣಿ ಬಾಣಂತಿಯರಿಗೆ ಅಯೋಡಿನ್ ಬಗ್ಗೆ ತಿಳಿಸಿರುತ್ತಾರೆ ಮತ್ತು ಐಡಿಸಿಎಫ್ ಕಾರ್ಯಕ್ರಮದ ಬಗ್ಗೆ ಜಿಂಕೆ ಓ ಆರ್ ಎಸ್ ಬಗ್ಗೆ, ಕುಟುಂಬ ಕಲ್ಯಾಣ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಈರಮ್ಮ ,ಆಶಾ ಕಾರ್ಯಕರ್ತೆ ನೇತ್ರಾವತಿ ಸೇರಿದಂತೆ ಇತರರು ಭಾಗವಹಿಸಿದ್ದರು.

 

Share This Article
error: Content is protected !!
";