ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಬೇಸಿಗೆ ದಗೆ ತೀರಿಸಿಕೊಳ್ಳಲು ಮಕ್ಕಳು ಕಾಲುವೆ, ಕೃಷಿ ಹೊಂಡ, ಬಾವಿ, ನದಿ, ಕೆರೆ ಕಟ್ಟೆಗಳಿಗೆ ತೆರಳಿ ಈಜಲು ಬಾರದೆ ಸಾವು ನೋವುಗಳು ಕಾಣುತ್ತಿರುವ ಘಟನೆಗಳು ಎಲ್ಲೆಡೆ ನಡೆಯುತ್ತಿರುತ್ತವೆ. ಮಕ್ಕಳ ಪೋಷಕರು ಈ ಕುರಿತು ಎಚ್ಚರ ವಹಿಸುವುದು ಅಗತ್ಯವಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಮಧುಮತಿ ಪ್ರೇಮ್ ಕುಮಾರ್ ಎಂಬುವರ ಏಳು ವರ್ಷದ ಪುತ್ರ ಬಾಲಾಜಿ ಕೋಡಿಹಳ್ಳಿಯ ಕೆರೆಯ ಸಮೀಪ ಇರುವ ಪಾಳು ಬಿದ್ದಿರುವ ಬಾವಿಯಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಮುಂಚೆ ತಳಕು ಹೋಬಳಿಯಲ್ಲಿ ಅನೇಕ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಎಲೆಕ್ಟ್ರಿಕ್ ಶಾಕ್, ಕೆರೆಯಲ್ಲಿ ಈಜಲು ಹೋಗಿ, ಸೂಸೈಡ್, ಬಾವಿಯಲ್ಲಿ ಸ್ನಾನ ಮಾಡಲು ಹೋಗಿ, ರಸ್ತೆ ಅಪಘಾತಗಳಲ್ಲಿ, ಮಾನಸಿಕ ಖಿನ್ನತೆಗೆ ಒಳಗಾಗಿ ಇನ್ನು ಜೀವನದಲ್ಲಿ ಬಾಳಿ ಬದುಕಬೇಕು ಎನ್ನುವ ಅದೆಷ್ಟೋ ಹದಿ ಹರೆಯದ ಯುವಕ ಯುವತಿಯರು ಸಾವನ್ನಪ್ಪಿದ್ದಾರೆ. ಅಲ್ಲದೆ ಇಂತಹ ಘಟನೆಗಳು ತಿಂಗಳಲ್ಲಿ ಎರಡು ಮೂರು ಘಟನೆಗಳು ನಡೆಯುತ್ತಲೇ ಇವೆ.
ಅಲ್ಲದೆ ಬೇಸಿಗೆ ರಜೆ ಬಂದಿದೆ ಎಂದರೆ ಪ್ರತಿ ವರ್ಷವು ಸುಮಾರು ವಿದ್ಯಾರ್ಥಿಗಳು ಸಾವಿಗೆ ಶರಣಾತ್ತಿದ್ದಾರೆ ಅದರಲ್ಲೂ ಗ್ರಾಮಿಣ ಪ್ರದೇಶದ ಮಕ್ಕಳು ತುಂಬಾ ಹೆಚ್ಚು ಸಾವನ್ನಪ್ಪುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ.
ಈ ಹಿಂದೆಯೇ ಸರ್ಕಾರ ಬೋರ್ವೆಲ್, ಕೊಳವೆ ಬಾವಿ,ಇನ್ನಿತರೆ ಪಾಳು ಬಾವಿಗಳನ್ನು ಮುಚ್ಚಿಸಲು ಸರ್ಕಾರ ಆದೇಶ ಹೊರಡಿಸಿ ಅನುದಾನ ಬಿಡುಗಡೆ ಮಾಡಿತ್ತು. ಆದರೂ ಕೆಲವು ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿಯ ಮಕ್ಕಳ ಸಾವುಗಳು ಮರುಕಳಿಸುತ್ತಲೇ ಇವೆ.
ಈಗಲಾದರೂ ಪ್ರತಿ ಗ್ರಾಮದಲ್ಲಿ ಇರುವ ಅನುಪಯುಕ್ತ ಬೋರ್ವೆಲ್ ಮತ್ತು ಕೊಳವೆ ಬಾವಿಗಳು, ಹಾಗೂ ಪಾಳು ಬಾವಿಗಳನ್ನು ಸರ್ವೇ ಮಾಡಿಸಿ ಮುಚ್ಚಿಸಬೇಕು.
ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸರಣಿ ಮಕ್ಕಳ ಸಾವುಗಳಿಗೆ ಇತಿಶ್ರೀ ಹಾಡಬೇಕು ಹಾಗೂ ಸಾರ್ವಜನಿಕರಿಗೆ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂಬುದೇ ಚಂದ್ರವಳ್ಳಿ ಪತ್ರಿಕೆಯ ಆಶಯ.
ಮಕ್ಕಳ ಸರಣಿ ಸಾವು ತಡೆಗಟ್ಟುವವರು ಯಾರು..? ಮತ್ತು ಹೇಗೆ..? ಎಂಬ ಯಕ್ಷ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆ ವ್ಯಾಪ್ತಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿ, ಬೆಸ್ಕಾಂ ಇಲಾಖೆ, ಕೃಷಿ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಮಟ್ಟದ ಆಡಳಿತ ಅಧಿಕಾರಿಗಳು ಈ ಘಟನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ತನಿಖೆ ನಡೆಸಿ, ಈ ಹದಿ ಹರೆಯದ ಜೀವಗಳ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಚಿತ್ರದುರ್ಗದ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಟಿ.ಶಿವಮೂರ್ತಿ ಮನವಿ ಮಾಡಿದ್ದಾರೆ.