ಚಂದ್ರವಳ್ಳಿ ನ್ಯೂಸ್, ಪಾವಗಡ:
ರೈತನ ಮೇಲೆ ಮೂರು ಕರಡಿಗಳು ದಾಳಿ ನಡೆಸಿದ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕರಿಯಮ್ಮನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಜಮೀನಿನ ಬೋರ್ವೆಲ್ ಸ್ವಿಚ್ ಆನ್ ಮಾಡಲು ಬುಧವಾರ ರಾತ್ರಿ 10.30ರ ಸಮಯದಲ್ಲಿ ತೆರಳಿ ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ಮೂತ್ರ ವಿಸರ್ಜನೆಗೆಂದು ನಿಂತಿದ್ದಾಗ ಕರಡಿಗಳು ದಾಳಿ ಮಾಡಿವೆ.
ದೊಡ್ಡ ಕರಡಿ ಜೊತೆಗಿದ್ದ ಎರಡು ಮರಿ ಕರಡಿಗಳು ರೊಚ್ಚಿಗೆದ್ದು ದೊಡ್ಡ ಕರಡಿ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಜೊತೆಯಲ್ಲಿದ್ದ ಈರಣ್ಣ ಎಂಬವರ ಮೇಲೆ ಕರಡಿ ದಾಳಿ ಮಾಡಿದ ಪರಿಣಾಮ ಅವರ ಭುಜದ ಭಾಗ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣ ಇಬ್ಬರೂ ಕೂಗಿದ್ದಾರೆ.
ರಸ್ತೆಯಲ್ಲಿದ್ದ ಕಲ್ಲುಗಳನ್ನು ಕರಡಿಯ ಮೇಲೆ ಎಸೆದಿದ್ದರಿಂದಾಗಿ ಅದು ತಪ್ಪಿಸಿಕೊಂಡು ಮರಿಗಳ ಜೊತೆ ಓಡಿ ಹೋಗಿವೆ. ಗಾಯಗೊಂಡ ಈರಣ್ಣ ಅವರನ್ನು ತಕ್ಷಣ ಬೈಕ್ನಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲಿಸಲಾಗಿದೆ. ಈ ಕುರಿತು ಗ್ರಾಮಸ್ಥರಾದ ಗೋಪಾಲ ಅವರು ಮಾತನಾಡಿ, ಕರಿಯಮ್ಮನ ಪಾಳ್ಯ ಗ್ರಾಮ ಮತ್ತು ಮುದ್ಧನ ಬೆಟ್ಟ ಅಕ್ಕಪಕ್ಕ ಇರುವ ಕಾರಣ ಬೆಟ್ಟದಿಂದ ಕರಡಿಗಳು ರಾತ್ರಿ ವೇಳೆ ಗ್ರಾಮದೊಳಗೆ ನುಗ್ಗುತಿವೆ.
ಬೆಟ್ಟದ ಸುತ್ತಲೂ ಬೇಲಿ ಹಾಕಿದರೆ ಕರಡಿಗಳು ರಾತ್ರಿ ವೇಳೆ ಗ್ರಾಮದೊಳಗೆ ಬರುವುದಿಲ್ಲ. ಅರಣ್ಯ ಇಲಾಖೆಯವರು ಸಹಕಾರ ಕೊಟ್ಟಿದ್ದಾರೆ. ಇನ್ನೂ ಹೆಚ್ಚಿನ ಸಹಕಾರ ಕೊಡಬೇಕು. ಬೆಟ್ಟದ ಸುತ್ತ ಬೇಲಿ ಹಾಕಿದರೆ ಎರಡು ಹಳ್ಳಿಗಳಿಗೂ ಅನುಕೂಲ ಎಂದು ಹೇಳಿದರು.
ಗಾಯಾಳು ಈರಣ್ಣ ಮಾತನಾಡಿ, ಜಮೀನಿನ ಬೋರ್ವೆಲ್ ಸ್ವಿಚ್ ಆನ್ ಮಾಡಲು ತೆರಳಿ ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ಕರಡಿ ದಾಳಿ ಮಾಡಿದೆ. ನಮ್ಮ ಹುಡುಗರು ಬಂದು ಕಲ್ಲಿನಿಂದ ಹೊಡೆದು ಓಡಿಸಿದರು. ನಂತರ ಪಾವಗಡಕ್ಕೆ ಬಂದೆ, ಅಲ್ಲಿಂದ ತುಮಕೂರಿಗೆ ಕಳುಹಿಸಿದರು ಎಂದು ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ ಈ ವರ್ಷದಲ್ಲಿ ಇದು ಮೂರನೇ ಪ್ರಕರಣ, ಸಾರ್ವಜನಿಕರು ರಾತ್ರಿ ಹೊತ್ತು ಒಬ್ಬಂಟಿಯಾಗಿ ಓಡಾಡಬೇಡಿ, ತೋಟಗಳಿಗೆ ಹೋಗಬೇಕಾದ್ರೂ ಶಬ್ದ ಮಾಡಿಕೊಂಡು ಓಡಾಡಿ. ಮರಿ ಕರಡಿಗಳಿದ್ದಾಗ ಹೆಣ್ಣು ಕರಡಿ ಕೋಪಗೊಂಡಿರುತ್ತವೆ. ಅವು ಹೋಗುವಾಗ ಅವುಗಳಿಗೆ ಹೆದರಿಸುವುದು ಅಥವಾ
ಕಲ್ಲು ತೆಗೆದುಕೊಂಡು ಹೊಡೆಯುವುದನ್ನು ಮಾಡಬೇಡಿ. ಅದರ ಪಾಡಿಗೆ ಅದನ್ನು ಹೋಗಲು ಬಿಡಿ, ಅದು ಹೋದ ನಂತರ ನಿಮ್ಮ ಕೆಲಸವನ್ನು ಮುಂದುವರೆಸಿ. ಅವುಗಳ ಹಾವಳಿ ಜಾಸ್ತಿಯಾಯ್ತು ಎಂದಾಗ ಅರಣ್ಯ ಇಲಾಖೆ ಸಂಪರ್ಕಿಸಿ, 24X7 ನಿಮ್ಮ ಸಂಪರ್ಕದಲ್ಲಿರುತ್ತೇವೆ. ಎಲ್ಲ ಪಂಚಾಯ್ತಿಗಳಲ್ಲಿಯೂ ನಮ್ಮ ನಂಬರ್ಗಳಿವೆ. ನಮ್ಮನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.

