ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭ

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚುನಾವಣಾ ಆಯೋಗದಿಂದ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಿದ್ದು ಪದವೀಧರರು ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಲು ಜಿಲ್ಲಾ ಕಾಂಗ್ರೆಸ್ ಸಮಿತಿ ಪದವೀಧರರ ವಿಭಾಗದ ಅಧ್ಯಕ್ಷ ಪ್ರಕಾಶ್ ರಾಮಾ ನಾಯ್ಕ್ ಮನವಿ ಮಾಡಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಯ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ (ಹರಿಹರ, ಜಗಳೂರು ದಾವಣಗೆರೆ ತಾಲ್ಲೂಕುಗಳು) ಒಳಪಟ್ಟಿದ್ದು ಮತದಾರರ ನೋಂದಣಿ ನಿಯಮಗಳು 1960ರ 31(3)ನೇ ನಿಯಮದ ಅನುಸಾರ ಈ ಮತಕ್ಷೇತ್ರದ ಮತದಾರರರ ಪಟ್ಟಿಯಲ್ಲಿ ಪದವೀಧರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಕ್ಕುಳ್ಳ ಪ್ರತಿಯೊಬ್ಬ ವ್ಯಕ್ತಿಗೆ ಮತದಾರರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಸಲುವಾಗಿ ಮತದಾರರರ ನೋಂದಣಿಗಾಗಿ ನಮೂನೆ 18ರಲ್ಲಿನ ಅರ್ಜಿಯನ್ನು ಭರ್ತಿಮಾಡಿ 6ನೇ ನವೆಂಬರ್- 2025ರಂದು ಅಥವಾ ಅದಕ್ಕೂ ಮೊದಲು ಸಂಬಂದಪಟ್ಟ ಅಧಿಕಾರಿಗಳಿಗೆ ತಲುಪಿಸಲು ಅವರು ಮನವಿ ಮಾಡಿದ್ದಾರೆ.

- Advertisement - 

ಪದವೀಧರ ಕ್ಷೇತ್ರದ ಮತದಾರರರ ಪಟ್ಟಿಯನ್ನು ಪ್ರತಿ ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳೂ ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಮತದಾರರಾಗಿ ನೋಂದಣಿಯಾಗಲು ಭಾರತದ ಪ್ರಜೆಯಾಗಿರುವ ಆಯಾ ಮತ ಕ್ಷೇತ್ರದೊಳಗಡೆ ಸಾಮಾನ್ಯವಾಗಿ ವಾಸಿಸುತ್ತಿರುವ

ಹಾಗೂ 1ನೇ ನವೆಂಬರ್ 2025ಕ್ಕೆ ಮುಂಚೆ (ಅರ್ಹತಾ ದಿನಾಂಕ) ಕನಿಷ್ಟ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರರ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಲು ಅರ್ಹನಾಗಿರುತ್ತಾನೆ ಎಂದು ಅವರು ತಿಳಿಸಿದ್ದಾರೆ.

- Advertisement - 

ಅರ್ಹ ವ್ಯಕ್ತಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿಗದಿತ ನಮೂನೆ-18ರ ಅರ್ಜಿಯೊಂದಿಗೆ ಪದವಿ ಪ್ರಮಾಣ ಪತ್ರದ ಪ್ರತಿ / ಸರ್ಟಿಫಿಕೇಟ್ / ಅಂಕ ಪಟ್ಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿ ಮತ್ತು ಗೆಜೆಟೇಡ್ ಅಧಿಕಾರಿಗಳಿಂದ ದೃಢೀಕರಿಸಿ ಅಡಕದೊಂದಿಗೆ ಸಲ್ಲಿಸಬೇಕು.

ಆದ್ದರಿಂದ ಜಿಲ್ಲೆಯ ಎಲ್ಲಾ ಪದವೀಧರರು ತಪ್ಪದೇ ನೊಂದಣಿ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಪ್ರಕಾಶ್ ರಮಾ ನಾಯ್ಕ್ ಮನವಿ ಮಾಡಿದ್ದಾರೆ.

 

Share This Article
error: Content is protected !!
";