ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಅತ್ಯಂತ ಯೋಜಿತ ನಗರ ಎಂಬ ಹೆಗ್ಗಳಿಕೆ ಪಡೆದಿದೆ, ಉದ್ಯಾನ ನಗರಿಯೆಂಬ ಹಣೆಪಟ್ಟಿಯೊಂದಿಗೆ ಹಲವು ವೈಶಿಷ್ಟ್ಯಗಳಿಂದ ಜಗತ್ತಿನಾದ್ಯಂತ ಇರುವ ಜನರನ್ನು ನಿರಂತರ ಆಕರ್ಷಿಸುತ್ತಿದೆ,
ಆದರೆ ಈ ಬೃಹತ್ ನಗರದ ಟ್ರಾಫಿಕ್ ಸಮಸ್ಯೆಯನ್ನು ಸುಧಾರಿಸಿ ಪರಿಹರಿಸುವಲ್ಲಿ ಕಾಂಗ್ರೆಸ್ ಸರ್ಕಾರದ ವಿಫಲತೆಯಿಂದಾಗಿ ಈಗ ಬೆಂಗಳೂರು ದೇಶದಲ್ಲಷ್ಟೇ ಅಲ್ಲ ವಿಶ್ವದಲ್ಲೇ ‘3 ನೇ ವಾಹನ ದಟ್ಟಣೆಯ ನಗರ‘ ಎಂಬ ಅಪಖ್ಯಾತಿಯ ಹಣೆಪಟ್ಟಿ ಹೊರುವ ಸ್ಥಿತಿಗೆ ತಲುಪಿರುವುದು ನೆದರ್ಲೆಂಡ್ ನ ಲೊಕೇಷನ್ ಟೆಕ್ನಾಲಜಿ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಪ್ರಮುಖ ನಗರಗಳ ಸಂಚಾರ ದಟ್ಟಣೆ ಕುರಿತ ವರದಿಯಲ್ಲಿ ಬಹಿರಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರೆಂದರೆ ಉದ್ಯಾನ ನಗರಿ ಎಂಬ ಸಿರಿಯ ಘನತೆ ಇತ್ತು ಆದರೆ ಈಗ ‘ವಾಹನ ದಟ್ಟಣೆಗೆ ಸಿಲುಕಿ ನರಳುವ ನಗರ’ ಎಂಬ ಅಪಖ್ಯಾತಿಗೆ ಈಡಾಗುತ್ತಿದೆ. ರಾಜ್ಯದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೃಹತ್ ಬೆಂಗಳೂರಿನ ಅಭಿವೃದ್ಧಿಯಂತೂ ಸಂಪೂರ್ಣ ನೆನೆಗುದಿಗೆ ಬಿದ್ದಿದೆ ‘ಬ್ರ್ಯಾಂಡ್ ಬೆಂಗಳೂರು’ ಎನ್ನುವುದು ಕೇವಲ ಬೊಗಳೆ ಘೋಷಣೆ ಎಂಬುದು ಬೆಂಗಳೂರಿಗರಿಗೆ ಈಗಾಗಲೇ ಅರ್ಥವಾಗಿದೆ ಎಂದು ಅವರು ತಿಳಿಸಿದ್ದಾರೆ.
ಟ್ರಾಫಿಕ್ ನಿಯಂತ್ರಣ ನಿಭಾಯಿಸುವಲ್ಲಿ ಈ ಸರ್ಕಾರ ತನ್ನ ಉಡಾಫೆತನ ಮುಂದುವರಿಸಿದಲ್ಲಿ ಇದರ ಪರಿಣಾಮದಿಂದ ಔದ್ಯೋಗಿಕ, ಕೈಗಾರಿಕಾ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಿಗೆ ಪೆಟ್ಟುಬಿಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.