ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ (ಟಿಸಿ) ಕೊಡದೇ ರೈತರನ್ನು ವಂಚಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಮನವಿ ಮಾಡಿದ್ದಾರೆ.
ಕೂನಿಕೆರೆ ಗ್ರಾಮದ ಶಾರದಮ್ಮ ಕೋಂ ಪಾಂಡುರಂಗಪ್ಪ ಇವರು ರಿ.ಸ.ನಂ.241 ರಲ್ಲಿ ಕೊಳವೆ ಬಾವಿ ಕೊರೆಸಿದ್ದು, ವಿದ್ಯುತ್ ಪರಿವರ್ತಕ (ಟಿ.ಸಿ.) ಯನ್ನು ಅಳವಡಿಸಲು 19,908-00 ರೂ. ದಿನಾಂಕ 19-01-2021 ರಂದು ಬೆಸ್ಕಾಂ ಇಲಾಖೆಗೆ ಹಣ ಜಮ ಮಾಡಿರುತ್ತಾರೆ. ಟಿಸಿ ಅವಳಡಿಸದೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಹೂವು, ಅಡಿಕೆ. ಬೆಳೆ ಉಳಿಸಿಕೊಳ್ಳಲು ಆಗುತ್ತಿಲ್ಲ, ಜಾನುವಾರುಗಳಿಗೆ ಮೇವು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿ 5 ವರ್ಷಗಳಾಗಿವೆ. ಅನುದಾನ ಬಂದು 2 ವರ್ಷಗಳಾಗಿದ್ದು, ಪರಿವರ್ತಕ ಕೇಳಿದರೆ, ಸರ್ಕಾರದಿಂದ ಅನುದಾನ ಬರಬೇಕು ಎಂದು ಸಬೂಬು ಹೇಳುತ್ತಾರೆ. ಆದರೆ ಲಂಚ ಕೊಟ್ಟರೆ 2 ದಿನದಲ್ಲಿ ವಿದ್ಯುತ್ ಪರಿವರ್ತಕ ಕೊಡುತ್ತಾರೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೂ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದೆವು. ವಿದ್ಯುತ್ ಪರಿವರ್ತಕ (ಟಿ.ಸಿ.) ಕೊಡಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಬೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಾದ ರಾಮಚಂದ್ರ ಸುತಾರ್, ಕಾರ್ಯನಿರ್ವಾಹಕ ಅಭಿಯಂತರರು, ಬೆಸ್ಕಾಂ, ಹಿರಿಯೂರು ಹಾಗೂ ಪೀರ್‌ಸಾಬ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ನಂದಕುಮಾರ್, ಜೆ.ಇ. (ಸೆಕ್ಷನ್ ಆಫೀಸರ್), ಮಂಜುನಾಥ, ಕಛೇರಿ ಗುಮಾಸ್ತ, ಸಿದ್ದೇಗೌಡ, ಮೇಸ್ತಿ (ಗುಮಾಸ್ತ) ಕಸಬಾ ಕೂಕೆರೆ ಉಸ್ತುವಾರಿ, ಲೈನ್‌ಮ್ಯಾನ್ ಗಂಗಾಧರ್ ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದಕ್ಕೆ ನೀವು ಹೆಂಗೆ ಪೆಟ್ಟಿಗೆ ಹಾಕಿಸಿಕೊಳ್ಳುತ್ತೀರಾ ನೋಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ.
ಇವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತರು ಮನವಿ ಮಾಡಿದ್ದಾರೆ. ಅಲ್ಲದೆ ಹಳೇ ಪರಿವರ್ತಕಗಳಿಗೆ ಬಣ್ಣ ಬಳಿದು ಕೊಡುತ್ತಾರೆ. ತಿಂಗಳೊಳಗಾಗಿ ಪಟ್ಟಿಗೆ ಸುಟ್ಟು ಹೋಗುತ್ತದೆ. ನೂರಾರು ರೈತರಿಗೆ ಈ ರೀತಿ ತೊಂದರೆ ಮಾಡಿರುತ್ತಾರೆ ಎಂದು ಪಾಂಡುರಂಗಪ್ಪ.ಎನ್, ನಿಂಗಪ್ಪ ಸೇರಿದಂತೆ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.