ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ರದುರ್ಗ ನಗರ ಪ್ರವಾಸಿ ಮಂದಿರದಿಂದ ಇಂಧನ ಸಚಿವರ ಶವಯಾತ್ರೆ ಮುಖಾಂತರ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಕಚೇರಿ ತನಕ ಹಮ್ಮಿಕೊಂಡು ನಂತರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಹೋರಾಟವನ್ನು ಮೇ-15ರಂದು ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ವಾಸುದೇವ ಬಣದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಇ.ಎನ್. ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ಅವರು ಚಿತ್ರದುರ್ಗದಲ್ಲಿ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತರ ಹಲವು ಬೇಡಿಕೆಗಳನ್ನು ಕೂಡಲೇ ರಾಜ್ಯ ಸರ್ಕಾರ ಈಡೇರಿಸಬೇಕೆಂದು ಆಗ್ರಹ ಮಾಡಿದರು.
1) ರಾಜ್ಯ ಸರ್ಕಾರ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸಲು 10,000 ರೂ. ಶುಲ್ಕ ನಿಗದಿಪಡಿಸಿರುವುದನ್ನು ಹಿಂಪಡೆಯಬೇಕು.
2) ಕೇಂದ್ರ, ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸಲು ಮಾಡಿರುವ ಯತ್ನ ನಿಲ್ಲಿಸಬೇಕು.
3) ರೈತರಿಗೆ ವಿದ್ಯುತ್ ಪರಿಕರಣಗಳನ್ನು ಅಕ್ರಮ-ಸಕ್ರಮದಯಲ್ಲಿ ಈ ಹಿಂದೆ ನೀಡಿದ್ದಂತೆಯೇ ರೈತರ ಉಚಿತ ವಿದ್ಯುತ್ ನ್ನು ಗೌರವದಿಂದ ನೀಡಬೇಕು.
4) ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು.
5) ರೈತರ ಜಮೀನಿನಲ್ಲಿ 3-4 ಬೋರ್‌ವೆಲ್‌ಗಳು ಇದ್ದು, ಅಂರ್ತಜಾಲ ಕಡಿಮೆ ಆದಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್ ಜೋಡನೆ ಮಾಡುವುದರಿಂದ ರೈತರ ಬದುಕು ದುಸ್ಥಿರವಾಗಲಿದೆ.
6) ಸರ್ಕಾರದ ಶೀಘ್ರ ಯೋಜನೆ ಅಡಿಯಲ್ಲಿ ಟಿ.ಸಿ.ಗಳನ್ನು ಮಾತ್ರ ನೀಡಲಿದ್ದು, ಉಳಿದ ಕಂಬ ಮತ್ತು ವೈರ್‌ಗಳನ್ನು ರೈತರು ಸ್ವಂತ ಖರ್ಚಿನಿಂದ ಮಾಡಿಸಲು ಸಾಧ್ಯವೇ ಇಲ್ಲ, ಸರ್ಕಾರವೇ ಉಚಿತವಾಗಿ ನೀಡಬೇಕು.
7) ಸೋಲಾರ್ ಪಂಪ್‌ಸೆಟ್‌ಗಳ ಮುಖಾಂತರ 500 ರಿಂದ1200 ಅಡಿ ತನಕ ಬೋರ್‌ವೆಲ್ ಗಳಲ್ಲಿ ನೀರು ಮೇಲೆ ಎತ್ತಲು ಸಾಧ್ಯವೇ?
8) ಜಮೀನಿನಲ್ಲಿ ವಾಸವಾಗಿರುವ ರೈತರಿಗೆ ವಿದ್ಯಾರ್ಥಿಗಳಿಗೆ, ಹೈನುಗಾರಿಕೆ ಮಾಡುವಂತವರಿಗೆ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಮರ್ಪಕ ಗುಣಮಟ್ಟದ ವಿದ್ಯುತ್ ನೀಡುವುದು.
9) ಜಮೀನಿನಲ್ಲಿ ವಾಸಿಸುತ್ತಿರುವ ರೈತರಿಗೆ ಸಂಜೆ 6.00 ಗಂಟೆಯಿಂದ ಬೆಳಿಗ್ಗೆ 6.00 ಗಂಟೆಯವರೆಗೆ ಕೆಲವು ಭಾಗದ ರೈತರಿಗೆ ವಿದ್ಯುತ್ ನೀಡುತ್ತಿದ್ದು, ಇನ್ನು ಕೆಲವು ಭಾಗದ ರೈತರಿಗೆ ವಿದ್ಯುತ್‌ನೀಡುತ್ತಿಲ್ಲ. ಆದ್ದರಿಂದ ಎಲ್ಲಾ ಭಾಗದ ರೈತರಿಗೂ ಸಮರ್ಪಕ ವಿದ್ಯುತ್‌ನೀಡಬೇಕು.
10) ಬೆಸ್ಕಾಂನವರು 11 ಕೆ.ವಿ ಮತ್ತು ಎಲ್.ಟಿ. ಲೈನ್ಗಳಲ್ಲಿ ಬೆಳೆದಿರುವ ಗಿಡ ಮರಗಳು ಸುಮಾರು 15 ವರ್ಷಗಳಿಂದ ಬೆಳೆದಿದ್ದು, ವಿದ್ಯುತ್ ತಾಗಿ ಲೈನ್ ವೈರ್ ಸುಟ್ಟು ಹೋಗುತ್ತಿವೆ, ಕೃಷಿ ಪಂಪ್ ಸೆಟ್, ಟಿ.ಸಿ. ಮೋಟಾರ್, ಕೇಬಲ್‌ಗಳು ಸುಟ್ಟು ರೈತರಿಗೆ ಲಕ್ಷಾಂತರ ರೂ. ಬೆಳೆನಷ್ಟವಾಗುತ್ತದೆ. ಬೆಸ್ಕಾಂಗೂ ಪ್ರತಿ ವರ್ಷ ಕೋಟ್ಯಾಂತರ ರೂ.ನಷ್ಟವಾಗುತ್ತಿದ್ದರೂ ಅಧಿಕಾರಿಗಳು ತೆರವುಗೊಳಿಸದೆ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ರೈತರು ಆರೋಪಿಸಿದರು.
ರೈತ ಮುಖಂಡರಾದ ಎನ್.ಜಯಲಕ್ಷ್ವಿ, ಸಿಡಿ ನಿಜಲಿಂಗಪ್ಪ ಕೊಳಾಳ್, ಪಿ.ನಾಗರಾಜ್, ಮಂಜುಳ, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಇದ್ದರು.