ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ತಾಲೂಕಿನ ಬೇತೂರು ಪಾಳ್ಯ ಗ್ರಾಮದ ಬಿ.ಕೆ ಸೀತಾರಾಮಯ್ಯ (90) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರು ಮೃತಪಟ್ಟಿದ್ದಾರೆ.
ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ.
ಅಂತಿಮ ದರ್ಶನ- ಬಿ.ಕೆ ಸೀತಾರಾಮಯ್ಯ ಅವರ ಅಂತಿಮ ದರ್ಶನವನ್ನು ಬೆಂಗಳೂರಿನ ವಿಜಯನಗರದ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಂತ್ಯ ಸಂಸ್ಕಾರ- ಹಿರಿಯೂರು ತಾಲೂಕಿನ ಬೇತೂರು ಪಾಳ್ಯ ಗ್ರಾಮದ ತೋಟದಲ್ಲಿ ಜೂನ್-9 ರಂದು ಸೋಮವಾರ ಮಧ್ಯಾಹ್ನ 12.30ಕ್ಕೆ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಗ್ರಾಮಾಭಿವೃದ್ಧಿ ಹರಿಕಾರ-
ಹಿರಿಯೂರು ತಾಲೂಕಿನ ಬೇತೂರು ಪಾಳ್ಯದ ಸಮಗ್ರ ಅಭಿವೃದ್ಧಿ ತಮ್ಮನನ್ನು ತಾವು ತೊಡಗಿಸಿಕೊಂಡಿದ್ದರು. ಗ್ರಾಮದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಸುದಾರಣೆ ಮಾಡಬೇಕೆಂಬ ಕನಸು ಕಂಡಿದ್ದ ಬಿ.ಕೆ ಸೀತಾರಾಮಯ್ಯ ಅವರು ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಿಸಿ ಆರಂಭಿಸಿದ್ದರು. ಇದಲ್ಲದೆ ಕುಗ್ರಾಮವಾಗಿದ್ದ ಬೇತೂರು ಪಾಳ್ಯಕ್ಕೆ ಪ್ರಾರ್ಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿಸಿ ಉತ್ತಮ ಆರೋಗ್ಯ ಸೇವೆ ಒದಗಿಸಿದ್ದರು. ಅಲ್ಲದೆ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿ ಕೇಂದ್ರದಲ್ಲಿ ಶ್ರೀ ಪಂಚಲಿಂಗೇಶ್ವರ ಪದವಿ ಕಾಲೇಜ್ ಮಂಜೂರು ಮಾಡಿಸುವ ಮೂಲಕ ಆಂದ್ರ ಗಡಿ ಗ್ರಾಮಗಳ ಶಿಕ್ಷಣಕ್ಕೆ ಆದ್ಯತೆ ನೀಡಿದ ಕೀರ್ತಿ ಸೀತಾರಾಮಯ್ಯ ಅವರಿಗೆ ಸಲ್ಲುತ್ತದೆ.
ಬೇತೂರು ಪಾಳ್ಯ ಗ್ರಾಮದ ಶ್ರೀಕೋಡಿ ತಿಮ್ಮಪ್ಪ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಸೀತಾರಾಮಯ್ಯ ಅವರು ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಟ್ಟಾಳು-ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಂಸದೆ ಡಿ.ಕೆ ತಾರಾದೇವಿ ಸಿದ್ದಾರ್ಥ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸೀತಾರಾಮಯ್ಯ ಅವರಿಗೆ ಆತ್ಮೀಯರಾಗಿದ್ದರು.
ಸಮಾಜಮುಖಿ ಚಿಂತನೆಗಳೊಂದಿಗೆ ಸಮಾಜಿಕ ಕಳಕಳಿಯೊಂದಿಗೆ ನಿಸ್ವಾರ್ಥ ಸೇವೆ ಮಾಡುತ್ತಾ ಗಮನ ಸೆಳೆದಿದ್ದ ಶಿಕ್ಷಣ ಪ್ರೇಮಿ ಬಿ.ಕೆ ಸೀತಾರಾಮಯ್ಯ ಅವರನ್ನು ಪಿಯು ಬೋರ್ಡ್ ಮೆಂಬರ್ ಮಾಡಲಾಗಿತ್ತು. ಅಲ್ಲದೆ ಸೆಂಟ್ರಲ್ ಜೈಲ್ ಕಮಿಟಿ ಮೆಂಬರ್, ರಾಜ್ಯ ಉಗ್ರಾಣ ನಿಗಮದ ಮೆಂಬರ್ ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯಾರಾಗಿ ಸೇವೆ ಸಲ್ಲಿಸಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರ ಎಸ್ಸಿ ಮೀಸಲಾಗಿದ್ದರಿಂದ ಅವರು ನೆರೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 1983ರಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.
ರಾಷ್ಟ್ರಪತಿಯಿಂದ ಸನ್ಮಾನ- ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಬಿ.ಕೆ ಸೀತಾರಾಮಯ್ಯ ಅವರನ್ನು ರಾಷ್ಟ್ರಪತಿ ಜೈಲ್ ಸಿಂಗ್ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದರು.
ಸಂತಾಪ-ಕುಂಚಿಟಿಗ ಸಮಾಜದ ಹಿರಿಯರಾದ ಬಿ.ಕೆ ಸೀತಾರಾಮಯ್ಯ ಅವರ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ನೇತೃತ್ವದಲ್ಲಿ ಗ್ರಾಮ, ಸಮಾಜ ಮತ್ತು ಹಿರಿಯೂರು ತಾಲೂಕಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದವು.
ಇವರ ಅಗಲಿಕೆಯಿಂದಾಗಿ ಕುಂಚಿಟಿಗ ಸಮಾಜ ಮತ್ತು ಕುಟುಂಬಕ್ಕೆ ಸಾಕಷ್ಟು ನಷ್ಟವಾಗಿದೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಜಿಲ್ಲಾ ಮತ್ತು ತಾಲೂಕು ಕುಂಚಿಟಿಗ ಸಮಾಜ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬೇತೂರು ಪಾಳ್ಯ ಜೆ.ರಾಜು ಪ್ರಾರ್ಥಿಸಿದ್ದಾರೆ.