ವಿವಿ ಸಾಗರದತ್ತ ಮುಖ ಮಾಡಿದ ಭದ್ರೆ

News Desk

ವಿವಿ ಸಾಗರದತ್ತ ಮುಖ ಮಾಡಿದ ಭದ್ರೆ
ಜುಲೈ-27 ರಿಂದ ವಿವಿ ಸಾಗರಕ್ಕೆ ಭದ್ರೆ ನೀರು
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿ.ವಿ. ಸಾಗರಕ್ಕೆ ಭದ್ರಾ ನದಿಯಿಂದ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಮೂಲಕ ನೀರು ಹರಿಸಲಾಗುವುದು, ಇದರಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿರುವ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿಯಲಿದೆ.

ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಕಳೆದ ಮೇ- ತಿಂಗಳ 15 ರಂದೇ ಪತ್ರ ಬರೆದು ವಿವಿ ಸಾಗರ ಸೇರಿದಂತೆ ಮತ್ತಿತರ ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ವಿವಿಧ ಕೆರೆ, ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವಂತೆ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೋರಿಕೊಂಡಿದ್ದರ ಮನವಿ ಮೇರೆಗೆ ಜುಲೈ-16 ರಂದೇ ಭದ್ರಾ ಜಲಾಶಯದಿಂದ ನೀರು ಹರಿಸಲು ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-4) ವನಿತಾಮಣಿ ಅವರು ಆದೇಶ ಹೊಡಿಸಿದ್ದಾರೆ.

- Advertisement - 

ಭದ್ರಾ ಮೇಲ್ದಂಡೆ ಯೋಜನೆ ಅಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಮುಖ್ಯ ಕಾಲುವೆಗೆ ನೀರು ಹರಿಸಲು ಸರ್ಕಾರ ಆದೇಶಿಸಿದ್ದು ಈ ನೀರನ್ನು ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯವಾದ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಹರಿಸಲಾಗುವುದು. ಈ ಕ್ರಮದಿಂದಾಗಿ ವಿ.ವಿ. ಸಾಗರ ಜಲಾಶಯಕ್ಕೆ ನೀರು ಹರಿಯಲಿದ್ದು ಇದರಿಂದ ಆ ಭಾಗದ ರೈತರಿಗೆ ಅನುಕೂಲವಾಗಲಿದೆ. ಅದಕ್ಕಿಂತ ಮುಖ್ಯವಾಗಿ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಡಿಆರ್ ಡಿಒ ಸೇರಿದಂತೆ ಮಾರ್ಗ ಮಧ್ಯದ ಹಲವು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅನುಕೂಲವಾಗಲಿದೆ.

ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 179.4 ಅಡಿಗೆ ಏರಿಕೆಯಾಗಿದ್ದು ನೀರಿನ ಒಳ ಹರಿವು 8065 ಕ್ಯೂಸೆಕ್ ಹರಿಯುತ್ತಿದೆ. ಯಾವುದೇ ಸಂದರ್ಭದಲ್ಲಿ ಭದ್ರಾ ಡ್ಯಾಂ ಭರ್ತಿಯಾಗುವ ಸಾಧ್ಯತೆ ಇದ್ದು 6919 ಕ್ಯೂಸೆಕ್ ನೀರನ್ನ ನದಿ ಮೂಲಕ ಹರಿಸಲಾಗುತ್ತಿದೆ. ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

- Advertisement - 

ಸರ್ಕಾರ ಸರ್ಕಾರ ಆದೇಶದ ಪ್ರಕಾರ ವಿ.ವಿ. ಸಾಗರ ಜಲಾಶಯಕ್ಕೆ 2 ಟಿಎಂಸಿ ನೀರು ಹಂಚಿಕೆಯಾಗಿದೆ ಮತ್ತು ಒಟ್ಟು 4.21 ಟಿಎಂಸಿ ನೀರನ್ನೆತ್ತಲು ಆದೇಶವಾಗಿದೆ. ಚಿತ್ರದುರ್ಗ ಜಿಲ್ಲೆ ಬರಗಾಲ ಪ್ರದೇಶವಾಗಿದ್ದು ಈ ಭಾಗಕ್ಕೆ ಕುಡಿಯುವ ನೀರಿನ ಆಸರೆಯಾಗಿದೆ. ಅಲ್ಲದೆ ವಿ.ವಿ. ಸಾಗರ ಜಲಾಶಯವು 12,135 ಹೆಕ್ಟೇರ್ ಅಂದರೆ 25 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ.

  2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭದ್ರಾ ಜಲಾಶಯದಿಂದ ತರೀಕೆರೆ ಏತ ನೀರಾವರಿ ಯೋಜನೆಯಡಿ ಬರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ಹಾಗೂ ಇದರಡಿ ಬರುವ 79 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50ರಷ್ಟು ನೀರು ತುಂಬಿಸಲು ಅನುವಾಗುವಂತೆ 1.47 ಟಿಎಂಸಿ ನೀರನ್ನು, ವಿವಿ ಸಾಗರಕ್ಕೆ 2 ಟಿಎಂಸಿ ನೀರು, ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಕಡೂರು ಹೊಗೂ ಹೊಸದುರ್ಗ ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಭಾಗಶಃ ಕೆರೆಗಳಿಗೆ ನೀರು ಹರಿಸಲು 0.50 ಟಿಎಂಸಿ ಹಾಗೂ ಕಡೂರು ಕೆರೆ ತುಂಬುವ ಯೋಜನೆಯ ಹಂತ-1ರಡಿ ಬರುವ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು 0.24 ಟಿಎಂಸಿ ನೀರು ಸೇರಿದಂತೆ ಒಟ್ಟಾರೆ ಭದ್ರಾ ಜಲಾಶಯದಿಂದ ಸುಮಾರು 4.21 ಟಿಎಂಸಿ ನೀರನ್ನೆತ್ತಲು ರಾಜ್ಯ ಸರ್ಕಾರ ಅನುಮತಿ ನೀಡಿ ಆದೇಶ ಮಾಡಿದೆ.
ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಇದೇ ತಿಂಗಳ ಜುಲೈ-27 ರಿಂದ ಭದ್ರಾದಿಂದ ನೀರನ್ನೆತ್ತಿ ವಿವಿ ಸಾಗರ ಮತ್ತು ಇತರೆ ಯೋಜನೆಗಳಿಗೆ ಹರಿಸಲಿದೆ.

ಏನಿದು ಯೋಜನೆ-
ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯು ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು ವೇದಾವತಿ ನದಿ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಯಬೇಕು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಶಾಂತಿಪುರ ಪಂಪ್ ಹೌಸ್-1ರಲ್ಲಿ 45 ಮೀಟರ್ ಮತ್ತು ಅಜ್ಜಂಪುರ ಸಮೀಪದ ಬೆಟ್ಟದತಾವರೆಕೆರೆ ಪಂಪ್ ಹೌಸ್-2ರಲ್ಲಿ 50 ಮೀಟರ್ ಎತ್ತರಕ್ಕೆ ನೀರನ್ನು ಮೇಲೆತ್ತಿ ಲಿಫ್ಟ್ ಮಾಡಲಾಗುತ್ತದೆ. ಎರಡು ಕಡೆಯ ಪಂಪ್ ಹೌಸ್ ಗಳಲ್ಲಿ ತಲಾ ಐದು ಮೋಟರ್ ಪಂಪ್ ಅಳವಡಿಕೆ ಮಾಡಲಾಗಿದ್ದರೂ ಸದ್ಯಕ್ಕೆ ಒಂದು ಪಂಪ್ ಹೌಸ್ ಚಾಲನೆ ಮಾಡಿ 700 ಕ್ಯೂಸೆಕ್ಸ್ ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿದೆ.

ಭದ್ರಾ ಜಲಾಶಯದಿಂದ ವೈ-ಜೆಕ್ಷನ್ ವರೆಗೆ ಸುಮಾರು 60 ಕಿಲೋ ಮೀಟರ್ ಉದ್ದದ ಕಾಲುವೆಯ ಕಾಮಗಾರಿ ಪೂರ್ಣಗೊಂಡಿದ್ದು ಆ ನಾಲೆ(ಕಾಲುವೆ) ಮೂಲಕ ನೀರನ್ನು ನರಸೀಪುರ-ಕಲ್ಲುಶೆಟ್ಟಿಹಳ್ಳಿ-ಹೆಬ್ಬೂರು ಸಮೀಪದ 7 ಕಿಲೋ ಮೀಟರ್ ಸುರಂಗ ಮಾರ್ಗದ ಮೂಲಕ ಭದ್ರಾ ನೀರನ್ನು ಹರಿಸಲಾಗುತ್ತಿದೆ. ಅಜ್ಜಂಪುರ ಬಳಿಯ ಹೆಬ್ಬೂರು ವೈ-ಜೆಕ್ಷನ್ ಸಮೀಪದಿಂದ ಸ್ವಾಭಾವಿಕವಾಗಿ ಹಳ್ಳದ ಮೂಲಕ 23 ಕಿಲೋ ಮೀಟರ್ ದೂರದ ಕುಕ್ಕಸಮುದ್ರ ಕೆರೆ, ನಂತರ 7 ಕಿಲೋ ಮೀಟರ್ ದೂರದಲ್ಲಿರುವ ವೇದಾವತಿ ನದಿಗೆ ನೀರನ್ನು ಸದ್ಯಕ್ಕೆ ಹರಿಸಲಾಗುತ್ತದೆ.

ಶಾಂತಿಪುರ ಪಂಪ್ ಹೌಸ್-1, ಜಂಭದಹಳ್ಳ ಅಕ್ವೆಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್ ಹೌಸ್-2, ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಟ್ಟೂರು ಗ್ರಾಮದ ಹತ್ತಿರವಿರುವ ವೈ-ಜಂಕ್ಷನ್‌ನಿಂದ ಹೆದ್ದೂರು, ಕಾಟಿನಗೆರೆ, ಬೆಣಕುಣಿಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಕಲ್ಕೆರೆ, ಹೆಚ್. ತಿಮ್ಮಾಪುರ, ಕಲ್ಲಹಳ್ಳಿ, ಚಿಕ್ಕಬಳ್ಳೇಕೆರೆ, ಹನುಮನಹಳ್ಳಿ, ಚೌಳ ಹಿರಿಯೂರು ಮತ್ತು ಹಿ. ತಿಮ್ಮಾಪುರ ಗ್ರಾಮಗಳ ಮಾರ್ಗವಾಗಿ ಹರಿದು ಕುಕ್ಕಸಮುದ್ರ ಕೆರೆಯಿಂದ ಹಳ್ಳದ ಮುಖಾಂತರ ವೇದಾವತಿ ನದಿಗೆ ಸೇರಿ ಅಲ್ಲಿಂದ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗುವುದು.

ವೇದಾವತಿ ನದಿಗೆ ನೀರು ಬಂದು ತಲುಪಿದ ನಂತರ ಚಿಕ್ಕಬಳ್ಳೆಕೆರೆ, ಬಾಗಶೆಟ್ಟಿಹಳ್ಳಿ, ಕೊರಟಕರೆ, ಬಲ್ಲಾಳ ಸಮುದ್ರ, ಮೆಟ್ಟಿನಹೊಳೆ, ಕೆಲ್ಲೋಡು, ಲಿಂಗದಹಳ್ಳಿ, ಕಾರೇಹಳ್ಳಿ, ಅತ್ತಿಮಗ್ಗೆ, ಬೇವಿನಹಳ್ಳಿ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಯಲಿದೆ. ವಾಣಿ ವಿಲಾಸ ಸಾಗರ ಸುಮಾರು 60 ಕಿಲೋ ಮೀಟರ್ ದೂರ ಇದೆ. ಈ ದೂರವನ್ನು ತಲುಪ ಸಂದರ್ಭದಲ್ಲಿ ಹೊಸದುರ್ಗ ಸಮೀಪದ ಕೆಲ್ಲೋಡ್ ಬ್ಯಾರೇಜ್ ಸೇರಿದಂತೆ ಐದಾದರು ಬ್ಯಾರೇಜ್ ಗಳು ಭರ್ತಿಯಾಗಬೇಕು.

ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಕಳೆದ 2019ರ ಸಾಲಿನಿಂದ ವಿವಿ ಸಾಗರಕ್ಕೆ ನೀರು ಭರ್ತಿ ಮಾಡಲಾಗುತ್ತಿದೆ. ಪ್ರತಿ ವರ್ಷ ಜೂನ್-15 ರಿಂದ ಮೂರು ತಿಂಗಳ ಕಾಲ ನೀರು ಹರಿಯಲಿದೆ.
ಆಗಸ್ಟ್-1 ರಿಂದ ವಿವಿ ಸಾಗರ ಸೇರಿದಂತೆ ತರೀಕೆರೆ, ಕಡೂರು, ಹೊಸದುರ್ಗ ಅಚ್ಚುಕಟ್ಟು ಪ್ರದೇಶ ಮತ್ತು ಕೆರೆಗಳ ಸಾಮರ್ಥ್ಯದ ಅರ್ಧದಷ್ಟು ನೀರು ಭರ್ತಿ ಮಾಡಲಾಗುತ್ತದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಭದ್ರಾ ಜಲಾಶಯದಿಂದ 4.21 ಟಿಎಂಸಿ ನೀರನ್ನೆತ್ತಲು ಆದೇಶ ಮಾಡಲಾಗಿದೆ. ಅಜ್ಜಂಪುರ ಸಮೀಪ ಒಂದು ಕಾಮಗಾರಿ ನಡೆಯುತ್ತಿದ್ದರಿಂದ ಈ ಸಾಲಿನಲ್ಲಿ ನೀರನ್ನೆತ್ತಲು ವಿಳಂಬವಾಗಿದೆ. ಆಗಸ್ಟ್-1 ರಿಂದ ಭದ್ರಾದಿಂದ ನೀರನ್ನೆತ್ತಿ ವಿವಿ ಸಾಗರ, ತರೀಕೆರೆ, ಕಡೂರು, ಹೊಸದುರ್ಗ ಕೆರೆಗಳಿಗೆ ಹರಿಸಲಾಗುತ್ತದೆ”.
ಸಣ್ಣ ಚಿತ್ತಯ್ಯ, ವ್ಯವಸ್ಥಾಪಕ ನಿರ್ದೇಶಕರು, ವಿಶ್ವೇಶ್ವರಯ್ಯ ಜಲ ನಿಗಮ, ಬೆಂಗಳೂರು.

 

Share This Article
error: Content is protected !!
";