ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಶಾಖಾ ಕಾಲುವೆ ಆರಂಭದಿಂದ 134.597 ಕಿ.ಮೀ. ರವರಗಿನ ನಿರ್ಮಾಣಕ್ಕೆ ರೂ.1,723.42 ಕೋಟಿ ವೆಚ್ಚದಲ್ಲಿ 12 ಪ್ಯಾಕೇಜ್‍ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 134.597 ಕಿ.ಮೀ ಕಾಲುವೆ ನಿರ್ಮಾಣ ಕಾಮಗಾರಿಯ ಪೈಕಿ 126.255 ಕಿ.ಮೀ. ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಉಳಿದ 8.342 ಕಿ.ಮೀ. ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.
ಭೂಸ್ವಾಧೀನ ಪರಿಹಾರ ಕುರಿತಂತೆ ಅಜ್ಜಂಪುರ ತಾಲ್ಲೂಕು ಅಬ್ಬಿನಹೊಳಲು ಗ್ರಾಮದ ಭೂಮಾಲೀಕರು ಈ ಕಾಲುವೆಯ ಪ್ರಾರಂಭಿಕ ರೀಚ್ ಸರಪಳಿ 0.900ಕಿ.ಮೀ. ನಿಂದ 2.600 ಕಿ.ಮೀ.ವರೆಗಿನ ಕಾಮಗಾರಿಕೆ ಅಡ್ಡಿ ಪಡಿಸಿದ್ದರು. ಆದ್ದರಿಂದ ಸಮಸ್ಯೆ ಪರಿಹರಿಸಲು ಖುದ್ದಾಗಿ ಭೇಟಿ ನೀಡಿ ಸ್ಥಳೀಯ ರೈತರ ಮನವೊಲಿಸಿದ್ದೇನೆ, ಕಾಮಗಾರಿಗೆ ಸದ್ಯ ಯಾವುದೇ ಅಡ್ಡಿಯಿಲ್ಲ.
ಭೂಸ್ವಾಧೀನ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳು ಇತ್ಯರ್ಥವಾಗಲು ಕನಿಷ್ಠ 3-4 ವರ್ಷಗಳಾಗುತ್ತದೆ. ಇದರಿಂದ ಕೃಷ್ಣಾ ಜಲ ನಿಗಮಕ್ಕೆ ಶೇ.15 ಬಡ್ಡಿ ರೂಪದಲ್ಲಿ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಕಾಮಗಾರಿಯೂ ವಿಳಂಬದಿಂದಾಗಿ ಯೋಜನೆಯ ವೆಚ್ಚವು ಹೆಚ್ಚಾಗುತ್ತದೆ.
ಆದ್ದರಿಂದ ಅಬ್ಬಿನಹೊಳಲು ಗ್ರಾಮಕ್ಕೆ ಸಂಬಂಧಿಸಿದಂತೆ 44 ಎ 20.08 ಗುಂ ಜಮೀನಿಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕ್ ಅದಾಲತ್ತಿನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅನುಮೋದನೆ ನೀಡಲಾಗಿರುತ್ತದೆ.
ಲೋಕ್ ಅದಾಲತ್ ತೀರ್ಪಿನನ್ವಯ ರೈತರಿಂದ ಭೂಸ್ವಾಧೀನ ಪಡೆದು ಬಾಕಿ ಉಳಿದಿರುವ 120ಮೀ ಉದ್ದದ ಕಾಲುವೆಯನ್ನು ಪ್ರಾರಂಭಿಸಿ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 114.200 ಕಿಮೀವರೆಗೆ ನೀರನ್ನು ಹರಿಸಲಾಗುವುದು.
ಇದರೊಂದಿಗೆ ಬಾಕಿ ಉಳಿದ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 114.209 ಕಿ.ಮೀ. ರಿಂದ 116.171 ಕಿ.ಮೀ.ವರೆಗಿನ ಗೋನೂರು ಅಕ್ವಡಕ್ಟ್ (ಮೇಲ್ಮಟ್ಟದ ಕಾಲುವೆ) ಕಾಮಗಾರಿಯಲ್ಲಿನ ಕೆಲವು ಭೂಸ್ವಾಧೀನ ಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಿ,
ಪ್ರಾಯೋಗಿಕ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ. ಅನುದಾನದ ಲಭ್ಯತೆಯ ಮೇರೆಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಭರವಸೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಉತ್ತರದಲ್ಲಿ ನೀಡಿದ್ದಾರೆ.

