ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಘಲಕ್ ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲ, ಶಾಸಕರಿಗೆ ವಿಧಾನಸೌಧದಲ್ಲೂ ರಕ್ಷಣೆ ಇಲ್ಲದಂತಾಗಿದೆ. ಸಚಿವರು ಮತ್ತು ಅವರ ಬೆಂಬಲಿಗರು ಬೆಳಗಾವಿಯ ಸುವರ್ಣ ಸೌಧದೊಳಗೆ ನುಗ್ಗಿ ಶಾಸಕರೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ರಾಜ್ಯದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಆರೋಪ ಬಂದಾಗ ಕಾನೂನಾತ್ಮಕವಾಗಿ ನಡೆದುಕೊಳ್ಳಬೇಕೇ ವಿನಃ ಉಗ್ರರ ಹಾಗೆ, ಭಯೋತ್ಪಾದಕರ ರೀತಿಯಲ್ಲಿ ಸುವರ್ಣ ಸೌಧದೊಳಗೆ ನುಗ್ಗಿ ಹಿಂಸಾತ್ಮಕ ಪ್ರತಿಕ್ರಿಯೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ವಿಧಾನ ಸಭೆ, ವಿಧಾನ ಪರಿಷತ್ತಿನಲ್ಲಿ ಪ್ರತಿಯೊಂದು ಚರ್ಚೆಗಳ ಆಡಿಯೋ ಹಾಗೂ ವಿಡಿಯೋ ದಾಖಲಾತಿ ಇರುತ್ತದೆ. ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಿ ಗೊಂದಲ ಎಬ್ಬಿಸಿದಂತೆ ರಾಜ್ಯದಲ್ಲೂ ಸರಣಿ ಭ್ರಷ್ಟಾಚಾರ, ಹಗರಣ ಮತ್ತು ಬಾಣಂತಿಯರ ಸಾವಿನ ಪ್ರಕರಣಗಳ ದಿಕ್ಕು ತಪ್ಪಿಸಲು ಸಿದ್ದರಾಮಯ್ಯ ಸರ್ಕಾರದಿಂದ ಸುಳ್ಳು ಮೊಕದ್ದಮೆ ಹಾಕಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಸುವರ್ಣ ಸೌಧದ ಎದುರು ಪ್ರತಿಭಟಿಸಿದ ಪಂಚಮಸಾಲಿ ಮೀಸಲಾತಿ ಹೋರಾಟಗಾರರಿಗೆ ಲಾಠಿ ಏಟು ನೀಡಿದ ಸರ್ಕಾರ, ಹೆಬ್ಬಾಳ್ಕರ್ ಅವರ ಗೂಂಡಾಗಳಿಗೆ ಸುವರ್ಣ ಸೌಧದ ಪ್ರವೇಶಕ್ಕೆ ಅವಕಾಶ ನೀಡಿ, ವಿಪಕ್ಷದ ಪರಿಷತ್ ಸದಸ್ಯರ ಮೇಲೆ ಹಲ್ಲೆಗೆ ಯತ್ನ ಮಾಡಲು ಅವಕಾಶ ನೀಡಿದ್ದು ಖಂಡನೀಯ.
ಸರ್ಕಾರ ಈ ಕೂಡಲೇ ಸುವರ್ಣ ಸೌಧದೊಳಗೆ ಅಕ್ರಮವಾಗಿ ನುಗ್ಗಿದ ಈ ಭಯೋತ್ಪಾಕರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಜಗತ್ತಿನ ಸರ್ವಾಧಿಕಾರಿ ಪಟ್ಟಿಗೆ ಹೊಸ ಸೇರ್ಪಡೆ – ಭಂಡ ಹಾಗೂ ಭ್ರಷ್ಟ ಸಿದ್ದರಾಮಯ್ಯ ಅವರು!! ಎಂದು ಬಿಜೆಪಿ ಗರಂ ಆಗಿದೆ.