ಪ್ರತಿಭಟನೆಗೆ ಸೀಮಿತವಾದ ಭಾರತ್ ಬಂದ್ 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರಾಷ್ಟ್ರಾದ್ಯಂತ ಕರೆ ನೀಡಿರುವ ಭಾರತ್ ಬಂದ್ ಗೆ ಹಲವು ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೆ ಕರ್ನಾಟಕ ರಾಜ್ಯದಲ್ಲಿ ಕೇವಲ ಪ್ರತಿಭನೆಗೆ ಸೀಮಿತವಾಯಿತು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಆದರೆ ಬಂದ್ ನಿಂದ ಸಾರ್ವಜನಿಕ ಜೀವನಕ್ಕೆ ಹೆಚ್ಚೇನೂ ಪರಿಣಾಮ ಬಿದ್ದಿಲ್ಲ. ಕರ್ನಾಟಕದಲ್ಲೂ ಪ್ರತಿಭಟನೆಗಳಿಗೆ ಬಂದ್ ಸೀಮಿತ ಆಗಿವೆ.

ಬ್ಯಾಂಕಿಂಗ್, ಪೋಸ್ಟ್ ಆಫೀಸ್, ವಿದ್ಯುತ್, ತಾಮ್ರ ಮತ್ತು ಕಲ್ಲಿದ್ದಲು ಗಣಿಗಾರಿಕೆ ಕೆಲಸಗಳು ನಿಂತು ಹೋಗಿವೆ ಎಂದು ವರದಿಯಾಗಿದೆ. ಸಾರಿಗೆ ವ್ಯವಸ್ಥೆಗೂ ತೊಂದರೆಯಾಗಿದೆ. ಸಾರ್ವಜನಿಕ ಸೇವೆಗಳು ಇಂದಿನ ಭಾರತ್ ಬಂದ್‌ನಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಭಾರತೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ಹೇಳಿದ್ದಾರೆ.

- Advertisement - 

29 ಕಾರ್ಮಿಕ ಕಾನೂನುಗಳ ತಿದ್ದುಪಡಿ ಮತ್ತು ಹೊಸ ಕಾರ್ಮಿಕ ಸಂಹಿತೆಗಳನ್ನ ವಿರೋಧಿಸಲಾಗಿದೆ. ಕಾರ್ಮಿಕ ಸಚಿವಾಲಯ ಹೇಳಿಕೆ ಪ್ರಕಾರ, ಆರ್‌ಎಸ್‌ಎಸ್‌ ಬೆಂಬಲಿತ ಭಾರತೀಯ ಮಜ್ದೂರ್ ಸಂಘ (BMS) ಸೇರಿದಂತೆ ಸುಮಾರು 213 ಯೂನಿಯನ್‌ಗಳು ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿತ್ತು.

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ರೈತ ಸಂಘಗಳು ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದಾಗಿ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದೆ. ಹಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ.

- Advertisement - 

ಸರ್ಕಾರದ ಕೆಲವು ನಿರ್ಧಾರಗಳನ್ನ ವಿರೋಧಿಸಿ ಟ್ರೇಡ್ ಯೂನಿಯನ್‌ಗಳು ಮುಷ್ಕರ ಹೂಡಿವೆ. ಈ ಮುಷ್ಕರದಿಂದಾಗಿ ಕೇರಳ, ಜಾರ್ಖಂಡ್ ಮತ್ತು ಪುದುಚೇರಿಯ ಕೆಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ತಮಿಳುನಾಡಿನ ಸೇಲಂನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ತೆಲಂಗಾಣದ ಮೆದಕ್‌ನಲ್ಲಿ ಸಿಐಟಿಯು ನಾಯಕರು ಬೈಕ್ ರ್ಯಾಲಿ ನಡೆಸಿದರು. ಹುಬ್ಬಳ್ಳಿಯಲ್ಲಿ ಜೆಸಿಟಿಯು ಸದಸ್ಯರು ಪ್ರತಿಭಟನೆ ನಡೆಸಿದರು. ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಕಾರ್ಮಿಕರ ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಭಾರತ ಬಂದ್‌ನಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಬಂದ್ ಪರಿಣಾಮ ಉಂಟಾಗಿಲ್ಲ. ಸಾರಿಗೆ ಸೇವೆಗಳು ಎಂದಿನಂತೆ ನಡೆಯುತ್ತಿವೆ. ಪ್ರತಿಭಟನಾ ಮೆರವಣಿಗೆಯನ್ನು ಫ್ರೀಡಂ ಪಾರ್ಕ್ ವರೆಗೆ ಕಾರ್ಮಿಕ ಸಂಘಟನೆಗಳ ಮುಖಂಡರು ನಡೆಸಿದರು. ಮೈಸೂರಿನಲ್ಲಿ ಎಐಟಿಯುಸಿ ಮತ್ತು ಇತರ ಸಂಘಟನೆಗಳು ಪ್ರತಿಭಟನೆ ನಡೆಸಿದವು.  

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸ್ಥಿರ-ಅವಧಿಯ ಉದ್ಯೋಗವನ್ನ ರದ್ದುಗೊಳಿಸಬೇಕು. ಅಗ್ನಿಪಥ್ ಯೋಜನೆ ಕೈಬಿಡಬೇಕು. 8 ಗಂಟೆಗಳ ಕೆಲಸದ ದಿನವನ್ನ ಜಾರಿಗೊಳಿಸಬೇಕು. ಹಳೆಯ ಪಿಂಚಣಿ ಯೋಜನೆ ಪುನಃ ಸ್ಥಾಪಿಸಬೇಕು. EPFO ಚಂದಾದಾರರಿಗೆ ಕನಿಷ್ಠ ಮಾಸಿಕ ಪಿಂಚಣಿ 9,000 ರೂಪಾಯಿ ನೀಡಬೇಕು.

ಸರ್ಕಾರದ ಆರ್ಥಿಕ ನೀತಿಗಳಿಂದ ನಿರುದ್ಯೋಗ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ವೇತನಗಳು ಕಡಿಮೆಯಾಗಿವೆ. ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳ ಮೇಲಿನ ಸಾಮಾಜಿಕ ವಲಯದ ವೆಚ್ಚವನ್ನ ಕಡಿತಗೊಳಿಸಲಾಗಿದೆ. ಇದರಿಂದ ಬಡವರು, ಕಡಿಮೆ ಆದಾಯದ ಜನರು ಮತ್ತು ಮಧ್ಯಮ ವರ್ಗದವರಿಗೆ ತೊಂದರೆಯಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಸಂಹಿತೆಗಳು ಕಾರ್ಮಿಕ ಸಂಘಟನೆಗಳನ್ನ ದುರ್ಬಲಗೊಳಿಸುತ್ತವೆ. ಕೆಲಸದ ಸಮಯವನ್ನ ಹೆಚ್ಚಿಸುತ್ತವೆ. ಕಾರ್ಮಿಕರ ಹಕ್ಕುಗಳನ್ನ ಕಸಿದುಕೊಳ್ಳುತ್ತವೆ. ಉದ್ಯೋಗದಾತರು ಕಾರ್ಮಿಕ ಕಾನೂನುಗಳನ್ನ ಉಲ್ಲಂಘಿಸಿದರೆ ಅವರನ್ನ ಶಿಕ್ಷಿಸುವುದನ್ನ ತಪ್ಪಿಸುತ್ತವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಯೋಜನೆಗಳಂತಹ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಕಾರ್ಮಿಕ ಸ್ಥಾನಮಾನ ನೀಡಿ ಅವರಿಗೆ ESIC ವ್ಯಾಪ್ತಿ ನೀಡಬೇಕು ಎಂದು ಒತ್ತಾಯಿಸಿದರು.

Share This Article
error: Content is protected !!
";