ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಯಾದಗಿರಿ ಬೆಟ್ಟದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನ, ಸೇವಾ ಸಮಿತಿ ವಾಲ್ಮೀಕಿ ನಗರ, ಹಿರೇ ಅಗಸಿ (ಯಾದಗಿರಿ) ಇವರು ಆಯೋಜಿಸುವ 2025ನೇ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಈ ಕುರಿತು ನಡೆದ ಸಭೆಯಲ್ಲಿ, ದೇವಸ್ಥಾನದ ಅರ್ಚಕ ವೆ. ಮೂ. ಸಿದ್ದಯ್ಯ ಸ್ವಾಮಿ ಹಾಗೂ ಸ್ಥಳೀಯ ಗುರುಹಿರಿಯರ ಸಮ್ಮುಖದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
2025ರ ಆಗಸ್ಟ್-11 ರಂದು ನಡೆಯುವ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ ಇಂತಿವೆ:
ಅಂದು ಬೆಳಗ್ಗೆ 6 ಗಂಟೆಗೆ ಕರ್ತೃ ಗದ್ದಿಗೆಯಲ್ಲಿ ಮಹಾ ರುದ್ರಾಭಿಷೇಕ ಹಾಗೂ ಲಿಂಗ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭ ಲಿಂಗವನ್ನು “ಕಾಶಿ ವಿಶ್ವನಾಥ” ಎಂದು ನಾಮಕರಣ ಮಾಡಲಾಗುವುದು.
ಬೆಳಗ್ಗೆ 9 ಗಂಟೆಗೆ ರಥಕ್ಕೆ ಕ್ಷೀರಾಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಭಾವಚಿತ್ರ ಮೆರವಣಿಗೆ, ವಿವಿಧ ವಾದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ.
ರಾತ್ರಿ 8 ಗಂಟೆಗೆ ಧಾರ್ಮಿಕ ಸಭೆ, ಭಜನೆ, ಕೈಕುಸ್ತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವದ ಸಂಭ್ರಮ ಹೆಚ್ಚಲಿದೆ.
ಜಾತ್ರಾ ಮಹೋತ್ಸವವನ್ನು ಭಕ್ತಿಭಾವದಿಂದ, ಶಿಸ್ತುಪಾಲನೆಯಿಂದ ಹಾಗೂ ಸಮಾಜದ ಏಕತೆಗೆ ಒತ್ತಿ ಹಚ್ಚುವಂತೆ ಆಚರಿಸಲು ಸೇವಾ ಸಮಿತಿ ಕಟಿಬದ್ಧವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

