ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಪ್ರೀಂ ಕೋರ್ಟ್ ತೀರ್ಪಿನ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗಿಕರಣವಾಗಬೇಕಿದೆ ಆದರೆ ಈ ವಾಸ್ತಾವಿಕ ದತ್ತಾಂಶಗಳು ಸದ್ಯ ಸರ್ಕಾರದ ಬಳಿ ಲಭ್ಯವಿಲ್ಲ. ಹಾಗಾಗಿ ಆಯೋಗ ಹೊಸದಾಗಿ ಸಮಗ್ರ ಸಮೀಕ್ಷೆ ಕೈಗೊಳ್ಳಲು ಕರ್ನಾಟಕ ಸರ್ಕಾರ ನ್ಯಾ ನಾಗಮೋಹನದಾಸ್ ಆಯೋಗದ ಅಧ್ಯಕ್ಷರಲ್ಲಿ ಭೋವಿ ಗುರುಪೀಠಾಧ್ಯಕ್ಷರಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಭೇಟಿಯಾದ ಭೋವಿ ಸಮುದಾಯದವರು ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗಿಕರಣ ಮಾಡುವ ಮೊದಲು “ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಪತ್ತೆ ಹಚ್ಚಬೇಕು. ವಾಸ್ತವಿಕ ದತ್ತಾಂಶಗಳ ಮೂಲಕ ಮಾತ್ರ ವರ್ಗಿಕರಿಸಲು ಸಾಧ್ಯ” ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಹಿನ್ನೆಲೆಯಲ್ಲಿ ಆಯೋಗವು ಕಾರ್ಯನಿರ್ವಹಿಸಲಿ ಎಂದಿದ್ದಾರೆ.
ಸಾಧ್ಯವಾಗದಿದ್ದರೆ ಈಗಾಗಲೇ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ರಾಷ್ಟ್ರೀಯ ಜನಗಣತಿಯು ಪೂರ್ಣಗೊಂಡು ಸಿಗುವ ಮಾಹಿತಿಗಳಿಗಾಗಿ ಕಾಯಬೇಕು. ಎಲ್ಲಾ ಪರಿಶಿಷ್ಟ ಸಮುದಾಯಗಳ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಆಯೋಗವು ಸಾರ್ವಜನಿಕ ಅಹವಾಲು ಸ್ವೀಕರಿಸಲು ನಿಗದಿಗೊಳಿಸಿರುವ ದಿನಾಂಕವನ್ನು ಇನ್ನೂ ಕನಿಷ್ಟ ಮೂರು ತಿಂಗಳುಗಳಿಗೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಯೋಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ಅಹವಾಲು ಸ್ವೀಕಾರಿಸಿ, ಅಧ್ಯಯನ ನಡೆಸಬೇಕು. ಸುಪ್ರೀಂ ಕೋರ್ಟ್ ಹೇಳಿರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಪಡೆಯಬೇಕು. ಈ ಸಮುದಾಯಗಳ ಸ್ಥಿತಿಗತಿಗಳ ಅಂಕಿಅಂಶಗಳು ಹೊರ ಬರುವವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಕೋರುತ್ತೇವೆ. ಅಲ್ಲಿಯವರೆಗೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ವಿನಂತಿಸಿದರು.
ಭೋವಿ ಸಮಾಜದ ನಿಯೋಗದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕೋಲಾರ ಸಂಸದ ಮಲ್ಲೇಶ ಬಾಬು, ಚಿತ್ರದುರ್ಗ ಆನಂದಪ್ಪ, ಹಾವೇರಿ ರವಿ ಪೂಜಾರ, ಮುನಿಮಾರಪ್ಪ, ಜಯರಾಮ, ನಿವೃತ್ತ ನ್ಯಾಯಧೀಶ ವೆಂಕಟೇಶ, ಲಯನ್ ಶ್ರೀಧರ, ಜಯಶಂಕರ, ತುಮಕೂರು ಓಂಕಾರ, ಪುರುಷೋತ್ತಮ, ಕಾಶಿ, ಗೀತಮ್ಮ, ಮಂಜುಳಮ್ಮ, ಡಾ.ನಿರ್ಮಲಮ್ಮ, ದೀಪಾ, ಚಿಕ್ಕಮಗಳೂರು ಚಂದ್ರಶೇಖರ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

