ಚಂದ್ರವಳ್ಳಿ ನ್ಯೂಸ್, ಬೀದರ್:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಎರಡು ದಿನಗಳ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಬಸವಾದಿ ಶರಣರ ಕರ್ಮಭೂಮಿ, ಸೂಫಿ-ಸಂತರ ನಾಡು ಬೀದರ್ ಅಣಿಯಾಗಿದೆ.
ಸಮ್ಮೇಳನ ಸ್ಥಳವಾದ ನಗರದ ಝೀರಾ ಕನ್ವೆನ್ಶನ್ ಹಾಲ್‍ನಲ್ಲಿ ಪ್ರಧಾನ ವೇದಿಕೆ, ನೋಂದಣಿ, ಪ್ರದರ್ಶನ ಮಳಿಗೆಗಳು, ಪತ್ರಕರ್ತರಿಗೆ ಊಟ, ಕುಡಿಯುವ ನೀರು ಸೇರಿದಂತೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಹಿರಿಯರು ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷರ ಸಲಹಾ ಸಮಿತಿ, ಸಮ್ಮೇಳನ ಪೋಷಕರು, ವಸತಿ, ಆಹಾರ, ಸಾರಿಗೆ, ಪ್ರಚಾರ, ಮೆರವಣಿಗೆ, ಪ್ರತಿನಿಧಿಗಳ ನೋಂದಣಿ- ಕಿಟ್ ವಿತರಣೆ, ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ-ಮಾರಾಟ ಮಳಿಗೆ, ಸಾಂಸ್ಕøತಿಕ, ಮಹಿಳಾ, ಆರೋಗ್ಯ, ಅತಿಥಿ ಸತ್ಕಾರ, ಸ್ಮರಣ ಸಂಚಿಕೆ ಮುದ್ರಣ, ಪ್ರವಾಸ ಹಾಗೂ ಶಿಸ್ತು ಪಾಲನೆ ಮತ್ತು ಸ್ವಯಂ ಸೇವಕರ ಸಮಿತಿಗಳು ಅರ್ಥಪೂರ್ಣ ಸಮ್ಮೇಳನಕ್ಕೆ ಅಗತ್ಯ ತಯಾರಿ ಮಾಡಿಕೊಂಡಿವೆ.
ಸಮ್ಮೇಳನ ನಿಮಿತ್ತ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲೆಡೆ ಸಮ್ಮೇಳಕ್ಕೆ ಸ್ವಾಗತ ಕೋರುವ ಕಟೌಟ್, ಬ್ಯಾನರ್‍ಗಳು ರಾರಾಜಿಸುತ್ತಿವೆ. ಪತ್ರಕರ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ.

