ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಗಜ್ಯೋತಿ ಬಸವಣ್ಣನವರ ಜನ್ಮಸ್ಥಳ ಬಸವನಬಾಗೆವಾಡಿಯಿಂದ ಬೆಂಗಳೂರಿಗೆ ಹೊರಟಿರುವ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ ವಿಕಲಚೇತನರ ಬೈಕ್ ರ್‍ಯಾಲಿ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿತು.
ತ್ರಿಚಕ್ರ ವಾಹನಗಳಲ್ಲಿ ಆಗಮಿಸಿದ ವಿಕಲಚೇತನರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ರ್‍ಯಾಲಿಯ ನೇತೃತ್ವ ವಹಿಸಿರುವ ವಿಕಲಚೇತನ ಮಲ್ಲಿಕಾರ್ಜುನ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದ ಅಂಗವಿಕಲರು ಬೀದಿಗೆ ಬರುವಂತಾಗಿದೆ. ನಮ್ಮ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತುವವರು ಯಾರು ಇಲ್ಲ. ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರೆಂಟಿಗಳನ್ನು ನೀಡಿ ಬಿಟ್ಟಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಕಲಚೇತನರಿಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ರಾಜಕೀಯವಾಗಿ ವಿಕಲಚೇತನರಿಗೆ ಮೀಸಲಾತಿ ನೀಡಬೇಕು. ವಿಕಲಚೇತನರು ಹಾಗೂ ಅವರ ಮಕ್ಕಳ ಉನ್ನತ ಶಿಕ್ಷಣಕ್ಕೆ ಮತ್ತು ನವೋದಯ, ಸೈನಿಕ, ಕಿತ್ತೂರರಾಣಿ ಚೆನ್ನಮ್ಮ, ಮುರಾರ್ಜಿದೇಸಾಯಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಮೀಸಲಾತಿ ಒದಗಿಸಬೇಕು.
ವಿಕಲಚೇತನರಿಗೆ ಪ್ರತಿ ತಿಂಗಳು ಆರು ಸಾವಿರ ರೂ.ಗಳ ಮಾಶಾಸನ ಹೆಚ್ಚಳವಾಗಬೇಕು. ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ ಪಾಸ್ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ತಿಪ್ಪಮ್ಮ, ಮಾರುತಿ ಟಿ.ಬಿ ತಿಪ್ಪೇಸ್ವಾಮಿ, ನಾಗರಾಜು, ಸುಭಾಸ ಹುಲಬೆಂಚ್, ಮಲ್ಲು ಬಿರಾದಾರ, ಮಂಜುನಾಥ ಪಿ. ರುದ್ರಮುನಿ ತೋಪುರಮಾಳಿಗೆ, ಲೇಖಕ ಹೆಚ್.ಆನಂದಕುಮಾರ್, ಜೈಪ್ರಕಾಶ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.