ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಮೆಣಸಿ ಗೇಟ್ ಬಳಿ ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಹೆಸರಘಟ್ಟದ ಕನ್ನಯ್ಯ(62) ಎಂದು ಗುರುತಿಸಲಾಗಿದೆ.
ದಾಬಸ್ ಪೇಟೆ-ಹೊಸಕೋಟೆ ಹೆದ್ದಾರಿಯಲ್ಲಿ ದಾಬಸ್ ಪೇಟೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಮೆಣಸಿ ಗೇಟ್ ಬಳಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಕ್ಟಿವ್ ಹೋಂಡಾ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕಾರಿನ ಮುಂಭಾಗ ಮತ್ತು ಬೈಕ್ ಸಂಪೂರ್ಣ ಜಖಂಗೊಂಡಿದ್ದು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ನೀರಿಕ್ಷಕ ಸಾದಿಕ್ ಪಾಷಾ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿದ್ದು ತನಿಖೆನಂತರ ಮತ್ತಷ್ಟು ಮಾಹಿತಿ ಹೊರ ಬರಲಿದೆ.
“ರಸ್ತೆ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ವಿಸ್ ರಸ್ತೆ , ಸ್ಕೈ ವಾಕ್ ಹಾಗೂ ಅಂಡರ್ ಪಾಸ್ ನಿರ್ಮಿಸುವಂತೆ ನಿರಂತರವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದೇವೆ ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದ್ದು ಸಾರ್ವಜನಿಕರ ಪ್ರಾಣಕ್ಕೆ ಬೆಲೆಯೇ ಇಲ್ಲದಂಥಗಿದೆ. ರಾಜಕೀಯ ಪ್ರಮುಖರೋ ಸಿನಿಮಾ ತಾರೆಯರೋ ಅಪಘಾತಕ್ಕೆ ಒಳಗಾದರೆ ಶೀಘ್ರ ಕ್ರಮ ಕೈಗೊಳ್ಳುವ ರಸ್ತೆ ಪ್ರಾಧಿಕಾರ ಹತ್ತಾರು ಸಾರ್ವಜನಿಕರ ಪ್ರಾಣವೇ ಹೋಗುತ್ತಿದ್ದರು ಗಮನ ಹರಿಸದೆ ಇರುವುದು ವಿಪರ್ಯಾಸವೇ ಸರಿ”.
ರಮೇಶ್, ಮಾಜಿ ಅಧ್ಯಕ್ಷರು, ಕೆಸ್ತೂರು ಗ್ರಾಮ ಪಂಚಾಯತಿ.

