ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಲತಾ ರವರು ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್ ಎಂದು ಎರಡು ಹುದ್ದೆಯನ್ನು ಅವರ ಇಚ್ಛಾನುಸಾರವಾಗಿ ದಾಖಲೆಗಳಲ್ಲಿ ನಮೂದಿಸಿಕೊಂಡು ಹಾಜರಾತಿಗಳಲ್ಲಿ ತಿದ್ದುಪಡಿ ಮಾಡಿ ಹುದ್ದೆಗಳನ್ನು ಕಾನೂನುಬಾಹಿರವಾಗಿ ಮಾರ್ಪಾಡು ಮಾಡಿಕೊಂಡು
ಹಾಗೂ ನರೇಗಾ ಕಾಮಗಾರಿಗಳಲ್ಲಿ ಅಕ್ರಮವನ್ನು ಮಾಡಲು ಶಾಮೀಲಾಗಿರುವುದು ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸದಸ್ಯರಾದ ಮಹೇಶ್ ನಗರಂಗೆರೆ ರವರು ಹಲವು ಬಾರಿ ಹೊಳಲ್ಕೆರೆ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ದೂರು ನೀಡಿ ತಿಳಿಸಿದರು.
ಯಾವುದೇ ಕ್ರಮ ಜರುಗಿಸದೆ ಇರುವುದರಿಂದ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧ್ಯಕ್ಷ ಎನ್.ಟಿ ನಾಗರೆಡ್ಡಿ ಮತ್ತು ಚಿತ್ರದುರ್ಗ ಜಿಲ್ಲಾ ಸಮಿತಿಯ ತಂಡ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಕ ಅಧಿಕಾರಿ ಸೋಮಶೇಖರ್ ರವರಿಗೆ ದಿನಾಂಕ:17.01.2024 ರಂದು ದೂರನ್ನು ಸಲ್ಲಿಸಲಾಯಿತು.
ಈ ದೂರಿನ ಅನ್ವಯ ತನಿಖೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಂಡು ಲತಾ ರವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಿದೆ. ಆದರೆ ಇವರ ಮೇಲೆ ಎಫ್ಐಆರ್ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ವಿಫಲವಾಗಿರುವುದು ಕಂಡುಬಂದಿದೆ ಎಂದು ಅವರು ಆರೋಪಿಸಿದರು.
ತಪ್ಪಿತಸ್ಥರಾದ ಲತಾ ಇವರ ಮೇಲೆ ಕಾನೂನುಬಾಹಿರ ಚಟುವಟಿಕೆ ಮಾಡಿರುವುದು ಸಾಬೀತು ಆಗಿರುವುದರಿಂದ, ಜಿಲ್ಲಾ ಪಂಚಾಯತ್ ಈ ಕೂಡಲೇ ಎಫ್ಐಆರ್ ದೂರು ದಾಖಲಿಸುವಂತೆ ಹಾಗೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಚಿತ್ರದುರ್ಗ ಜಿಲ್ಲಾ ಸಮಿತಿಯ ಮಹೇಶ್ ಆಗ್ರಹಿಸಿದ್ದಾರೆ.