ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಾತ್ರಾಳ್ ತಿಮ್ಮಪ್ಪನಹಳ್ಳಿ ಸಮೀಪವಿರುವ ಗಂಧಾರಸ್ವಾಮಿ ಶಾಂತವೀರ ಅವಧೂತ ಮಠದ ಲಿಂಗೈಕ್ಯ ಮಠಾಧೀಶರಾದ ಗಂಗಾಧರಸ್ವಾಮೀಜಿರವರ ಜನ್ಮದಿನೋತ್ಸವದ ಅಂಗವಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಗೌತಮ್ ವೆಂಕಟೇಶಿ, ವಿರುಪಾಕ್ಷಪ್ಪ, ಮಂಜುನಾಥಸ್ವಾಮಿ, ಹರೀಶ್, ರುದ್ರೇಶಿ, ಸಂತೋಷ್ ಇವರುಗಳನ್ನು ಸನ್ಮಾನಿಸಿ ಮಾತನಾಡಿದ ಪ್ರಶಾಂತ ಕುಮಾರ ಸ್ವಾಮೀಜಿ ಸಮಾಜ ಸುಧಾರಣೆಗಾಗಿ ಅನೇಕ ವರ್ಷಗಳ ಕಾಲ ಗಂಗಾಧರಸ್ವಾಮಿ ಕೇದಾರನಾಥ, ಬದ್ರಿನಾಥ ಇನ್ನು ಅನೇಕ ಕಡೆ ಸುತ್ತಾಡಿ ಪ್ರವಚನಗಳನ್ನು ನೀಡಿದ್ದಾರೆ. ಸದಾ ಶಿವನ ಆರಾಧಕರಾಗಿದ್ದ ಸ್ವಾಮೀಜಿಯ ಜೀವನವೇ ಒಂದು ಹೋರಾಟವಾಗಿತ್ತು. ಇಂತಹವರ ತತ್ವ ಸಿದ್ದಾಂತಗಳ ಮೇಲೆ ಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆಂದು ಹೇಳಿದರು.
ನಮ್ಮ ಮಠ ಕೇವಲ ಭೋವಿ ಸಮಾಜಕ್ಕಷ್ಟೆ ಸೀಮಿತವಲ್ಲ. ಎಲ್ಲಾ ಜಾತಿ ಜನಾಂಗದ ಹಿತ ಬಯಸುತ್ತದೆ. ಮಕ್ಕಳನ್ನು ಶಿಕ್ಷಣವಂತರಾನ್ನಾಗಿಸುವ ಜೊತೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕೆಂದರು.
ಶರಣರ ಕೀರ್ತನೆಗಳನ್ನು ಮನವರಿಕೆ ಮಾಡಿಕೊಂಡು ಮಹಾಭಾರತ, ರಾಮಾಯಣ ಗ್ರಂಥಗಳನ್ನು ಓದಿಕೊಂಡು ಅದರಲ್ಲಿನ ತಿರುಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

