ಬಿಜೆಪಿ ಕಾರ್ಯಕರ್ತ ಪ್ರವೀಣ್ ಆತ್ಮಹತ್ಯೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಎಂಬುವವರು ಫೇಸ್ ಬುಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಲ್ಲಿ ಪ್ರಕರಣ ವರದಿಯಾಗಿದೆ.

ಆನೇಕಲ್ ನ ಎಸ್.ವಿ.ಎಂ ಸ್ಕೂಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು(35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಬಿಜೆಪಿ ಕಾರ್ಯಕರ್ತ ಫೇಸ್ಬುಕ್ ವಿಡಿಯೋ ಮಾಡಿ ಹಲವರ ಹೆಸರುಗಳನ್ನು ಪ್ರಸ್ತಾಪಿಸಿ ಮರಕ್ಕೆ ನೇಣು ಬಿಗಿದುಕೊಂಡು ಪ್ರವೀಣ್ ಸಾವಿಗೆ ಶರಣಾಗಿದ್ದಾರೆ.

ಕಿರುಕುಳ?
ತಮ್ಮ ಫೇಸ್ ಬುಕ್ ವಿಡಿಯೋದಲ್ಲಿ ಪ್ರವೀಣ್ ಗೌಡ ಹಲವರ ಮೇಲೆ ವಂಚನೆ ಮತ್ತು ಹಲ್ಲೆ ಆರೋಪ ಹೊರಿಸಿದ್ದು
, ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ಹಾಗೂ ಕೌನ್ಸಿಲರ್ ಭಾಗ್ಯಮ್ಮ ಮತ್ತು ಶ್ರೀನಿವಾಸ್ ವಿರುದ್ಧವೂ ಆರೋಪ ಮಾಡಲಾಗಿದೆ. ಪ್ರಮುಖವಾಗಿ ತಮ್ಮ ಸಾವಿಗೆ ಇವರೇ ಕಾರಣ ಎಂದು ಹಲವರನ್ನು ಹೆಸರಿಸಿರುವ ಅವರು, ಆ ಪೈಕಿ ಕಿರಣ್ ಎಂಬಾತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಸಮಂದೂರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ, ಭಾಸ್ಕರ್, ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ, ಸರವಣ ಇವರೇ ನನ್ನ ಸಾವಿಗೆ ಕಾರಣ. ಯಾರನ್ನು ಬಿಟ್ಟರೂ ಕಿರಣ್​ನನ್ನು ದಯವಿಟ್ಟು ಬಿಡಬೇಡಿ. ಕಿರಣ್ ಹಲವು ಹೆಣ್ಣು ಮಕ್ಕಳಿಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದಾನೆ. ಕಿರಣ್​ ಮಾಡಿರುವ ಇಂತಹ ಕೆಲಸಗಳೆಲ್ಲಾ ನನ್ನ ಮೇಲೆ ಬಂದಿವೆ. ಹಣದ ವಿಚಾರವಾಗಿ ಮಾತುಕತೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಪ್ರವೀಣ್ ಫೇಸ್​​ಬುಕ್ ವಿಡಿಯೋದಲ್ಲಿ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ವಿರುದ್ಧವೂ ಪ್ರವೀಣ್ ಗಂಭೀರ ಆರೋಪ ಮಾಡಿದ್ದು ಬಿಜೆಪಿ ಮುಖಂಡ ನಾಯನಹಳ್ಳಿ ಮುನಿರಾಜು ಮನೆಗೆ ಕರೆದಿದ್ದರು. ಆ ಸಂದರ್ಭದಲ್ಲಿ ಆನೇಕಲ್ ಕೌನ್ಸಿಲರ್ ಭಾಗ್ಯಮ್ಮ ಹಾಗೂ ಆಕೆಯ ಪತಿ ಶ್ರೀನಿವಾಸ್ ಇದ್ದರು. ಏಕಾಏಕಿ ಹತ್ತಾರು ಮಂದಿಯನ್ನು ಕರೆಸಿಕೊಂಡಿದ್ದ ಭಾಗ್ಯಮ್ಮ ಶ್ರೀನಿವಾಸ್, ಮೊಬೈಲ್ ಕಿತ್ತುಕೊಂಡು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಸಿದ್ದಾರೆ.

ನಾನು ಸತ್ತ ಮೇಲೆ ನನ್ನ ದೇಹದ ಮೇಲಿರುವ ಗಾಯದ ಗುರುತುಗಳನ್ನು ಪರಿಶೀಲಿಸಿ ಪೊಲೀಸರು ನನಗೆ ನ್ಯಾಯ ಕೊಡಿಸಬೇಕು ಎಂದು ಪ್ರವೀಣ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಗುರುವಾರ ರಾತ್ರಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.

 

Share This Article
error: Content is protected !!
";