ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ಮತ್ತು ಜೆಡಿಎಸ್​​ ನಾಯಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್​ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದ್ದು
, ಬೀದರ್​ನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಂಭವಿಸಿದೆ.

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ನಾಯಕರು ಪ್ರಿಯಾಂಕ್​ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಸದಾ ನೈತಿಕತೆ ಬಗ್ಗೆ ಮಾತಾಡುವ ಪ್ರಿಯಾಂಕ್ ಖರ್ಗೆ ಕೂಡಲೇ ರಾಜೀನಾಮೆ ನೀಡಲಿ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ್​ ನಾರಾಯಣ ಆಗ್ರಹ ಮಾಡಿದ್ದಾರೆ.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಆತ್ಮಹತ್ಯೆ, ಗುತ್ತಿಗೆದಾರರ ಆತ್ಮಹತ್ಯೆ ಎಲ್ಲವೂ ನಡೆಯುತ್ತೆ. ಇಂದು ಸಚಿನ್ ಎಂಬ ಭಾಲ್ಕಿಯ ಗುತ್ತಿಗೆದಾರ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಪ್ರಿಯಾಂಕ್ ಖರ್ಗೆ ಆಪ್ತನೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ. ಸಚಿನ್ ಸಾವಿನ ತನಿಖೆ ನಡೆಯಬೇಕು. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್​ ಸರ್ಕಾರ ಚೆಲ್ಲಾಟವಾಡುತ್ತಿದೆ:
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಹೇಳಿಕೆ ನೀಡಿ
, ಕಾಂಗ್ರೆಸ್​ ಸರ್ಕಾರ ಗುತ್ತಿಗೆದಾರರ ಹೆಸರಿನಲ್ಲಿ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಹಲವು ಸಮಸ್ಯೆಗಳು ಇದ್ದರೂ ನಿರ್ವಹಣೆ ಮಾಡುತ್ತಿಲ್ಲ. ಜವಾಬ್ದಾರಿ ನಿರ್ವಹಣೆ ಮಾಡದೇ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಪ್ರಿಯಾಂಕ್​ ಖರ್ಗೆ ರಾಜ್ಯದಲ್ಲಿ ನನ್ನನ್ನು ಬಿಟ್ಟರೆ ಸಚ್ಚಾರಿತ್ರ್ಯ ವ್ಯಕ್ತಿ ಇಲ್ಲ ಅಂತಾರೆ. ಇದೀಗ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಹೆಸರೇ ಬಂದಿದ್ದು ಈಗ ಏನು ಹೇಳುತ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್​ ಮಂಗಳೂರಿನಲ್ಲಿ ಗುತ್ತಿಗಾದರನ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಬೀದರ್​ನ ಸಚಿನ್ ಎಂಬ ಗುತ್ತಿಗೆದಾರನ ಬಳಿ ಒಂದು ಕೋಟಿ ರೂ ಡಿಮ್ಯಾಂಡ್ ಇಟ್ಟಿದ್ದಾರೆ. ನಾನೇ ಸತ್ಯಹರಿಶ್ಚಂದ್ರ ಎಂದು ಬೀಗುತ್ತಿರುವ ಪ್ರಿಯಾಂಕ್​ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಸತ್ಯ, ಅಹಿಂಸೆಯ ವಿಚಾರ ಇಟ್ಟು ಅಧಿವೇಶನ ಮಾಡಲು ಹೊರಟವರು ಮೊದಲು ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ. ಆಗ ಮಹಾತ್ಮಗಾಂಧಿಯ ಹೆಸರನ್ನು ಹೇಳಿ. ಇಲ್ಲದಿದ್ದರೆ ನಿಮಗೆ ಮಹಾತ್ಮಗಾಂಧಿಯ ಹೆಸರು ಹೇಳುವ ನೈತಿಕತೆ ಇಲ್ಲ ಎಂದು ರವಿ ಕುಮಾರ್ ವಾಗ್ದಾಳಿ ಮಾಡಿದರು.

 

- Advertisement -  - Advertisement - 
Share This Article
error: Content is protected !!
";