ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಶೋಷಿತ ಸಮುದಾಯದ ಯಾವುದೇ ನಾಯಕನಿಗೆ ನೀಡಿ ಎಂದು ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ವಂಚಿತ ಬಿಜೆಪಿಯ ಎಸ್.ಸಿ, ಎಸ್.ಟಿ. ಘಟಕದ ಪದಾಧಿಕಾರಿಗಳ ಹಾಗೂ ಶೋಷಿತ ಸಮುದಾಯದವರು ರಾಜ್ಯದ ಮುಖಂಡರನ್ನು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಬಿಜೆಪಿ ಪಕ್ಷ ದೇಶದಲ್ಲಿ ಸಾಕಷ್ಟು ಬೆಳೆದಿದೆ. ಇಲ್ಲಿ ಸೇರಿರುವವರು ಮಾತ್ರವಲ್ಲ ಬಿಜೆಪಿ ಕಾರ್ಯಕರ್ತರು. ಪ್ರತಿ ಮನೆ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ. ಬಿಜೆಪಿ ಪಕ್ಷ ಹುಟ್ಟಿದಾಗಿನಿಂದ ಸಂಘಟನೆ ಮಾಡುತ್ತಾ ಪ್ರತಿ ೩ ವರ್ಷಕ್ಕೊಮ್ಮೆ ಸಂಘಟನೆಯ ಜವಾಬ್ದಾರಿಗಳನ್ನು ಬದಲಾವಣೆ ಮಾಡುತ್ತಿದೆ. ಪಕ್ಷದ ರಾಷ್ಟ್ರಾಧ್ಯಕ್ಷರಿಂದ ಹಿಡಿದು ಪಕ್ಷದ ಮೋರ್ಚಾಗಳ ಅಧ್ಯಕ್ಷರವರೆಗೂ ಬದಲಾವಣೆಯಾಗುತ್ತಾ ಬರುತ್ತದೆ. ಜಿಲ್ಲೆಯಲ್ಲಿ ಕೆಲವು ಸಮುದಾಯಗಳು ಮಾತ್ರ ಜವಾಬ್ದಾರಿ ನಿಭಾಯಿಸುತ್ತೇವೆ. ಶೋಷಿತ ಸಮುದಾಯಗಳಿಗೆ ಜವಾಬ್ದಾರಿ ಸ್ಥಾನಗಳು ಸಿಗುತ್ತಿಲ್ಲ. ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮೇಲಿನ ಜವಾಬ್ದಾರಿಗಳು ಕೆಲವು ಸೀಮಿತ ಸಮುದಾಯಗಳಿಗೆ ಸೀಮಿತವಾಗಬಾರದು. ಶೋಷಿತ ಸಮುದಾಯಗಳಿಗೂ ಆ ಜವಾಬ್ದಾರಿಗಳು ಸಿಗಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಈವರೆಗೆ ಎಸ್.ಸಿ ಸಮುದಾಯಕ್ಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿಲ್ಲ. ಅದರಂತೆ ಎಸ್.ಟಿ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಈ ಜವಾಬ್ದಾರಿಗಳು ಕೇವಲ ಎರಡು ಸಮುದಾಯಗಳಲ್ಲಿ ಗಿರಿಕಿ ಹೊಡೆಯುತ್ತಿವೆ ಗೊಲ್ಲ ಮತ್ತು ಲಿಂಗಾಯಿತ ಜಾತಿಗಳ ಹೆಸರೇಳದೆ ಅವರು ಬೇಸರ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಬೇರೆ ಪಕ್ಷದವರು ನಮ್ಮನ್ನು ನೋಡಿ ನಗುತ್ತಿದ್ದಾರೆ. ನೀವೇಕೆ ಬಿಜೆಪಿ ಪಕ್ಷದಲ್ಲಿ ಇದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ನಾವು ಹಿಂದುತ್ವ ಹಾಗೂ ರಾಷ್ಟ್ರೀಯವಾದ ಇಟ್ಟುಕೊಂಡು ನಾವು ಬಿಜೆಪಿ ಪಕ್ಷದಲ್ಲಿದ್ದೇವೆ. ಆಂತರಿಕ ಪ್ರಜಾಪ್ರಭುತ್ವ ಸಿಗಬೇಕಾದರೆ ಎಲ್ಲಾ ಸಮುದಾಯಗಳಿಗೂ ಜವಾಬ್ದಾರಿ ಸಿಗಬೇಕು ಎಂದು ರಾಜ್ಯದ ಮುಖಂಡರನ್ನು ಆಗ್ರಹಿಸಿದರು.
ಬಿಜೆಪಿ ಮುಖಂಡ ಜಯಪಾಲಯ್ಯ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಶೋಷಿತ ಸಮುದಾಯಕ್ಕೆ ನೀಡುವುದಕ್ಕೆ ನಾವುಗಳು ಜಿಲ್ಲೆಯ ಸಂಸದರನ್ನು, ಶಾಸಕರನ್ನು ಜಿಲ್ಲೆಯ ಪಕ್ಷದ ಎಲ್ಲಾ ಮೋರ್ಚಾಗಳ ಅಧ್ಯಕ್ಷಗಳನ್ನು ಭೇಟಿ ಮಾಡಲಿದ್ದೇವೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಶೋಷಿತ ಸಮುದಾಯದ ಯಾವುದೇ ನಾಯಕನಿಗೆ ನೀಡಿ ಎಂದು ಒತ್ತಾಯಿಸುತ್ತೇವೆ. ಈ ವಿಚಾರವಾಗಿ ಪಕ್ಷದ ವರಿಷ್ಠರಾದ ಸಂತೋಷ್ ಜಿ ಅವರನ್ನು ಭೇಟಿ ಸಹ ಮಾಡಲಿದ್ದೇವೆ ಎಂದರು.
ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತದಾರರಲ್ಲಿರುವ ಎಸ್.ಟಿ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷ ಸಂಘಟನೆ ಆಗುತ್ತದೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಎಸ್.ಟಿ ಸಮುದಾಯಕ್ಕೆ ಮೀಸಲಿರುವ ೧೫ ಕ್ಷೇತ್ರಗಳಲ್ಲಿ ಸಹ ನಾವು ಸೊತ್ತಿದ್ದೇವೆ ಎಂದರು.
ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಶೋಷಿತ ಸಮುದಾಯದ ಮುಖಂಡರೆದ್ದರೆ ಎಸ್ ಟಿ ಸಮುದಾಯದಿಂದ ಜಯಪಾಲಯ್ಯ ಪಾಪೇಶ್ ನಾಯಕ್, ಎಸ್ ಸಿ ಸಮುದಾಯದಿಂದ ಚಲವಾದಿ ತಿಪ್ಪೇಸ್ವಾಮಿ, ಮೋಹನ್ ಜಿ.ಎಚ್. ಪರಶುರಾಮ್, ಓಬಿಸಿ ಸಮುದಾಯದಿಂದ ಸಂಪತ್ ಕುಮಾರ್ ಕಣದಲ್ಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಶೋಷಿತ ಸಮುದಾಯದ ಯಾವುದೇ ನಾಯಕನಿಗೆ ನೀಡಿ ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪಾಪೇಶ್ ನಾಯಕ್, ಬಾಳೆಕಾಯಿ ರಾಮದಾಸ್, ಪ್ರಶಾಂತ್, ಚಲವಾದಿ ತಿಪ್ಪೇಸ್ವಾಮಿ, ಪರಶುರಾಮ್, ನವೀನ್, ಕಾಂಚನ, ಸುಮಾ, ಯೋಗೀಶ್ ಸಹ್ಯಾದ್ರಿ, ಪ್ರಶಾಂತ್ ನಾಯಕ, ಪಾಲಣ್ಣ ರೇಣುಕಾಪುರ, ಶಾಂತಕುಮಾರ್, ಸುರೇಶ ಉಗ್ರಣ, ಮಹಾಲಿಂಗಪ್ಪ, ದೊರೆ ನಾಗರಾಜ್, ಪಾಂಡುರಂಗ, ಸಣ್ಣ ನಿಂಗಪ್ಪ, ಕೃಷ್ಣಮೂರ್ತಿ, ನವೀನ್ ಶಾಂತಕುಮಾರ್, ನಾಗರಾಜ್ ಅಂಜನಪ್ಪ ಇತರರು ಭಾಗವಹಿಸಿದ್ದರು.