ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೈಲಾಗದ ಶತ್ರುವಿನ ಕೊನೆಯ ಅಸ್ತ್ರವೇ “ಅಪಪ್ರಚಾರ” ಎಂಬಂತೆ ಬಿಜೆಪಿಗರು ಸುಳ್ಳು ಆಪಾದನೆಗಳನ್ನು ಮಾಡಿ ಸಚಿವರ ತೇಜೋವಧೆ ಮಾಡಬಹುದು ಎನ್ನುವ ಭ್ರಮೆಯಿಂದ ಹೊರಬೇಕಾಗಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಬೀದರ್‌ನ ಗುತ್ತಿಗೆದಾರ ಸಚಿನ್ ಪಂಚಾಳ ಬರೆದಿಟ್ಟ ಡೆತ್ ನೋಟ್ ನಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಹೆಸರಿಲ್ಲದಿದ್ದರೂ ಬಿಜೆಪಿಗರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಸಚಿವರ ಹೆಸರನ್ನು ಪ್ರಸ್ತಾಪಿಸಿ ಹುಯಿಲೆಬ್ಬಿಸುತ್ತಿದ್ದಾರೆ.
ಬಡವರಿಗೆ ಸೇರಬೇಕಾಗಿದ್ದ ಅಕ್ಕಿ ಕಳ್ಳತನ ಮಾಡಿ ಗೂಂಡಾಗಿರಿ ಮಾಡುತ್ತಿದ್ದ ವ್ಯಕ್ತಿಗೆ ರಾಜಮರ್ಯಾದೆ ನೀಡಿ ಚುನಾವಣೆಗೆ ನಿಲ್ಲಿಸಿ ಕಲಬುರಗಿಯನ್ನು ಮಾಫಿಯಾ ಅಡ್ಡವನ್ನಾಗಿ ಮಾಡುವ ಬಿಜೆಪಿಗರ ಷಡ್ಯಂತ್ರಕ್ಕೆ ಪ್ರಿಯಾಂಕ್ ಖರ್ಗೆ ಅವರು ಎಳ್ಳು ನೀರು ಬಿಟ್ಟಿದ್ದರು.
ಅಧಿಕಾರದ ಮದದಿಂದ, ದುಡ್ಡಿನ ದುರಾಸೆಯಿಂದ ಪಿಎಸ್‌ಐ ಹಗರಣವೆಸಗಿ ಲಕ್ಷಾಂತರ ಪ್ರತಿಭಾವಂತ ಯುವಕರ ಉದ್ಯೋಗದ ಕನಸಿಗೆ ಕೊಳ್ಳಿಯಿಟ್ಟಿದ್ದನ್ನು ಬಯಲಿಗೆಳೆದಿದ್ದರು.
ವಕ್ಫ್ ವರದಿಯನ್ನು ಮುಚ್ಚಿಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೂರೈವತ್ತು ಕೋಟಿ ಆಮಿಷವೊಡ್ಡಿದ್ದಾರೆ ಎಂದು ಅಂದಿನ ವಕ್ಫ್ ಅಧ್ಯಕ್ಷರೇ ಮಾಧ್ಯಮಗಳಲ್ಲಿ ಘಂಟಾನುಘೋಷವಾಗಿ ಹೇಳಿದ್ದನ್ನು ಮತ್ತೆ ಮಾಧ್ಯಮದ ಮುಂದೆ ಪ್ರಸ್ತಾಪಿಸಿದ್ದರು.
ಕಲಬುರಗಿಯಲ್ಲಿ ಮರಳು ದಂಧೆ, ಬೆಟ್ಟಿಂಗ್ ದಂಧೆ ಹಾಗೂ ಗಾಂಜಾ ಸಾಗಾಟವನ್ನು ಬಂದ್ ಮಾಡಿಸಿ ಅಲ್ಲಿನ ಅನೈತಿಕ ಚಟುವಟಿಕೆಗಳಿಗೆ ಅಡ್ಡಗೋಡೆಯಾಗಿ ನಿಂತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕಂಡರೆ ಬಿಜೆಪಿಗರು ಹೊಟ್ಟೆ ಉರಿಯಿಂದ ಮೈಪರಚಿಕೊಳ್ಳುತ್ತಿದ್ದಾರೆ! ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಕ್ ಸಮರ ಮಾಡಿದೆ.