ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬಿಜೆಪಿ ಹಿರಿಯ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.
ಕಳೆದ ಮಾರ್ಚ್ 26ರಂದು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದರೂ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದ ಹಿನ್ನೆಲೆಯಲ್ಲಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಕೇಂದ್ರ ಬಿಜೆಪಿಯ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂಪಾಠಕ್ ಆದೇಶದಲ್ಲಿ ತಿಳಿಸಿದ್ದಾರೆ.
ಶಿಸ್ತು ಸಮಿತಿ ನೋಟಿಸ್: ಬಿಜೆಪಿಯ ಶಿಸ್ತು ಸಮಿತಿ ಈ ಇಬ್ಬರು ಶಾಸಕರಿಗೆ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಪಕ್ಷದ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದರೂ ನಿಮ್ಮ ಉತ್ತರ ತೃಪ್ತಿಕರವಾಗಿಲ್ಲ ಎಂದು ಉಚ್ಚಾಟನೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ನಿಮಗೆ ಸ್ಪಷ್ಟನೆ ಕೊಟ್ಟಿದ್ದರೂ ನೀವು ತಪ್ಪುಗಳನ್ನು ಪುನರಾವರ್ತಿಸುತ್ತಲೇ ಇದ್ದೀರಿ. ಹೀಗಾಗಿ ಪಕ್ಷದಲ್ಲಿ ಶಿಸ್ತು ಕಾಪಾಡಿಕೊಳ್ಳುವ ಉದ್ದೇಶದಿಂದ ನಿಮ್ಮನ್ನು ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರದ ಶಿವರಾಮ್ ಹೆಬ್ಬಾರ್ ಈ ಇಬ್ಬರು ಶಾಸಕರನ್ನು ಬಿಜೆಪಿ ಉಚ್ಚಾಟನೆ ಮಾಡಿದೆ.
2018 ಹಾಗೂ 2023ರ ವಿಧಾನಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಈ ಇಬ್ಬರು ಶಾಸಕರು ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದರು. ಶಾಸಕಾಂಗ ಪಕ್ಷದ ಸಭೆ ಸೇರಿದಂತೆ ಪಕ್ಷದ ಚಟುವಟಿಕೆ ಹಾಗೂ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರಲ್ಲದೆ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ಅಷ್ಟೇ ಅಲ್ಲದೆ ಆಡಳಿತ ರೂಢ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳಬೇಡಿ ಎಂದು ರಾಜ್ಯ ಘಟಕ ಬಹಿರಂಗವಾಗಿ ಎಚ್ಚರಿಕೆ ಕೊಟ್ಟಿದ್ದರೂ ನಿರ್ಲಕ್ಷ್ಯ ಮಾಡಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಬಹಿರಂಗವಾಗಿಯೇ ಮತ ಹಾಕುವ ಮೂಲಕ ಬಿಜೆಪಿಗೆ ಭಾರೀ ಮುಜುಗರ ಉಂಟು ಮಾಡಿದ್ದನ್ನ ಪಕ್ಷ ಗಂಭೀರವಾಗಿ ತೆಗೆದುಕೊಂಡಿತ್ತು.
ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲೂ ಪಕ್ಷದ ಯಾವುದೇ ಹೋರಾಟದಲ್ಲೂ ಭಾಗಿಯಾಗಿರಲಿಲ್ಲ. ಬದಲಿಗೆ ಕಾಂಗ್ರೆಸ್ ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಸ್ವಾಗತಿಸುತ್ತಿದ್ದರು. ಲೋಕಸಭೆ ಹಾಗೂ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬೆಂಬಲಿಸುವ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಕೇಂದ್ರ ಬಿಜೆಪಿ ವರಿಷ್ಠರು, ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಸಂದರ್ಭದಲ್ಲೇ ಭಿನ್ನಮತಿಯರಿಗೆ ರವಾನಿಸಿದ್ದರು.
ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಉಚ್ಚಾಟನೆಗೊಂಡ ಬೆನ್ನಲ್ಲೇ ಇದೀಗ ಭಿನ್ನಮತ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪಕ್ಕೆ ಸಿಲುಕಿರುವ ಹರಿಹರ ಶಾಸಕ ಬಿ.ಪಿ.ಹರೀಶ್ ಹಾಗೂ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೂ ಆತಂಕ ಎದುರಾಗಿದೆ.
ಕೇಂದ್ರ ಬಿಜೆಪಿ ವರಿಷ್ಠರು ಈ ಇಬ್ಬರಿಗೂ ಕೂಡ ಸ್ಪಷ್ಟನೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈಗಾಗಲೇ ಇದರ ಬಗ್ಗೆ ಸ್ಪಷ್ಟ ನೀಡಲಾಗಿದೆ. ಆದರೆ, ದೆಹಲಿ ಹೈಕಮಾಂಡ್ ಮುಂದೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬ ಆತಂಕ ಶುರುವಾಗಿದೆ.