ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿ ಹೆಸರನ್ನು ಜನರ
ಮನಸ್ಸಿನಿಂದ ತೆಗೆದುಹಾಕಲು ಬಿಜೆಪಿ, ಆರ್‌ಎಸ್‌ಎಸ್, ಭಜರಂಗದಳ ಹೊರಟಿರುವುದರ ವಿರುದ್ದ ಜನ ಜಾಗೃತರಾಗಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಮಹಾತ್ಮಗಾಂಧಿರವರ ೭೮ ನೇ ಪುಣ್ಯತಿಥಿಯಲ್ಲಿ ಗಾಂಧಿ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಭಾರತದ ವಿಭಜನೆಗೆ ಗಾಂಧಿ ಕಾರಣ ಎಂದು ಬಿಜೆಪಿ, ಆರ್‌ಎಸ್‌ಎಸ್, ಬಜರಂಗದಳದವರು ಆಪಾದನೆ ಹೊರಿಸುತ್ತಿದ್ದಾರೆ. ನಿಜವಾಗಿಯೂ ಭಾರತವನ್ನು ವಿಭಜನೆ ಮಾಡಿದವರುರು ಸಾವರ್ಕರ್, ಮುಖರ್ಜಿ, ಜಿನ್ನಾ ಇವರುಗಳು ಎನ್ನುವ ಸತ್ಯಾಂಶವನ್ನು ಜನರಿಗೆ ಮನವರಿಕೆ ಮಾಡಬೇಕಿದೆ. ಮನಮೋಹನ್‌ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಮಹಾತ್ಮತಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ರಾಜ್ಯದ ಆರು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಗಾಂಧಿ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಮಟ್ಟದಲ್ಲಿ ಐದರಿಂದ ಹತ್ತು ಕಿ.ಮೀ. ಪಾದಯಾತ್ರೆ ನಡೆಸಿ ಗಾಂಧಿ ವಿಚಾರಗಳನ್ನು ಜನರಿಗೆ ತಲುಪಿಸುವಂತೆ ಕೆ.ಪಿ.ಸಿ.ಸಿ. ಸೂಚಿಸಿದೆ. ಗಾಂಧಿಯನ್ನು ಹತ್ಯೆ ಮಾಡಿರುವುದು ಅತ್ಯಂತ ಹೇಡಿತನ. ಕೇವಲ ಕಚೇರಿಗಳಲ್ಲಿ ಗಾಂಧಿ ಪುಣ್ಯತಿಥಿ ಮಾಡುವ ಬದಲು ವಾರ್ಡ್‌ಗಳಲ್ಲಿ ರಾಷ್ಟ್ರಪಿತನ ವಿಚಾರಗಳನ್ನು ತಿಳಿಸಲಾಗುವುದು. ಹೋರಾಟಗಾರ ಗಾಂಧಿ ಪ್ರತಿಮೆ ೧೩೦ ದೇಶಗಳಲ್ಲಿದೆ. ಅಳಿಸಲು ಸಾಧ್ಯವಿಲ್ಲ. ವಿದೇಶಗಳಿಂದ ಬಂದ ಎಲ್ಲರೂ ರಾಜ್‌ಘಾಟ್‌ಗೆ ಹೋಗಿ ಗಾಂಧಿ ಸಮಾಧಿಗೆ ಗೌರವ ಸಲ್ಲಿಸುತ್ತಿರುವ ಈ ಕಾಲಘಟ್ಟದಲ್ಲಿ ಬಿಜೆಪಿ. ಆರ್‌ಎಸ್‌ಎಸ್. ಬಜರಂಗದಳದವರು ಗಾಂಧಿ ಕೊಂದ ವ್ಯಕ್ತಿಯನ್ನು ಬಿಂಬಿಸುತ್ತಿರುವುದನ್ನು ನಾವುಗಳು ವಿರೋಧಿಸುತ್ತೇವೆಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ಬಡವರಿಗೆ ಉದ್ಯೋಗ ಸಿಕ್ಕಿದೆ. ಕೇಂದ್ರ ಸರ್ಕಾರ ಕಾಂಗ್ರೆಸ್ ಯೋಜನೆಯನ್ನು ಕಿತ್ತುಕೊಂಡು ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವುದರ ವಿರುದ್ದ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ವಿನಂತಿಸಿದರು.
ಕಾಂಗ್ರೆಸ್ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ನ್ಯಾಯವಾದಿ ಡಿ.ಎಸ್.ಸುದರ್ಶನ್ ಮಾತನಾಡುತ್ತ ಮಹಾತ್ಮಗಾಂಧಿರವರ ಸತ್ಯ ಮತ್ತು ಅಹಿಂಸೆಯ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸರ್ವ ಧರ್ಮವನ್ನು ಇಷ್ಟಪಟ್ಟವರು ಗಾಂಧಿಜಿ. ಬಿಜೆಪಿ. ಆರ್‌ಎಸ್‌ಎಸ್.ನಿಂದ ಗಾಂಧಿ ವಿಚಾರಗಳಿಗೆ ಧಕ್ಕೆಯಾಗುತ್ತಿದೆ. ಸತ್ಯವನ್ನು ನಾಶ ಮಾಡಲು ಹೊರಟವರ ಕರಾಳ ಮುಖವನ್ನು ಜನತೆಯ ಮುಂದೆ ಬಿಚ್ಚಿಡುವ ಕೆಲಸವಾಗಬೇಕೆಂದರು.
ಕಾಂಗ್ರೆಸ್ ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನ ಕಾಲಿಗೆ ಎರಗಿ ಗುಂಡು ಹಾರಿಸಿದ ನಾಥುರಾಮ್‌ಗೋಡ್ಸ್ ಹೇಡಿತವನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ. ಗಾಂಧಿಯನ್ನು ವಿರೋಧಿಸುವ ಬಿಜೆಪಿ. ಸಂವಿಧಾನ ಬದಲಾವಣೆ ಮಾಡಲು ಹೊರಟಿದೆ. ಗಾಂಧಿ ವಿಚಾರಗಳನ್ನು ಅಳಿಸಿ ಹಾಕಲು ನಾವುಗಳು ಬಿಡುವುದಿಲ್ಲ. ಮುಂದಿನ ಪೀಳಿಗೆಗೆ ಗಾಂಧಿ ವಿಚಾರಗಳನ್ನು ತಿಳಿಸಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‌ಗಾಂಧಿ ಭಾರತ್ ಜೋಡೋ ಪಾದಯಾತ್ರೆ ನಡೆಸಿದ್ದು, ಬಿಜೆಪಿ.ಗೆ ಸಹಿಸಲು ಆಗುತ್ತಿಲ್ಲ ಎಂದರು.
ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡುತ್ತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪುಣ್ಯಾತ್ಮ ಮಹಾತ್ಮಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ ರಾಮನ ಭಾವುಟು ಹಿಡಿದುಕೊಂಡು ಜನರ ತಲೆ ಕೆಡಿಸುತ್ತಿದೆ. ಎಲ್ಲದರಲ್ಲೂ ಸಾವರ್ಕರ್, ಭಗತ್‌ಸಿಂಗ್‌ರವರನ್ನು ಮುಂದೆ ತಂದು ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವುದರ ವಿರುದ್ದ ನಾವುಗಳು ಹೋರಾಡಬೇಕಿದೆ ಎಂದು ಹೇಳಿದರು.
ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ ರಾಷ್ಟ್ರಪಿತ ಮಹಾತ್ಮಗಾಂಧಿ ಪುಣ್ಯತಿಥಿ ಕೇವಲ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಿದರೆ ಸಾಲದು. ಇಡಿ ದೇಶದ ಜನ ಆಚರಿಸುವಂತಾದಾಗ ಮಾತ್ರ ನಿಜವಾಗಿಯೂ ಗಾಂಧಿ ತತ್ವಗಳು ಜೀವಂತವಾಗಿರಲು ಸಾಧ್ಯ. ದೇಶ-ವಿದೇಶಗಳಲ್ಲಿ ವರ್ಣಬೇಧ ತಾರತಮ್ಯಗಳ ವಿರುದ್ದ ಗಾಂಧಿ ಹೋರಾಡಿದರು. ಗಾಂಧಿ ಹೆಸರನ್ನು ಹಿಂದಿಕ್ಕುವ ಕೆಲಸ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ.ಗೆ ಮುಂದಿನ ದಿನಗಳಲ್ಲಿ ಜನ ಸರಿಯಾದ ಪಾಠ ಕಲಿಸಲಿದ್ದಾರೆಂದು ನುಡಿದರು.
ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಮಾಜಿ ಅಧ್ಯಕ್ಷ ಹೆಚ್.ಅಂಜಿನಪ್ಪ ಮಾತನಾಡುತ್ತ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಗಾಂಧಿ ಮತ್ತು ಅಂಬೇಡ್ಕರ್‌ರವರನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು. ಬಿಜೆಪಿ. ಆರ್‌ಎಸ್‌ಎಸ್. ಗಾಂಧಿ ತತ್ವ ಸಿದ್ದಾಂತಗಳಿಗೆ ಮಸಿ ಬಳಿಯಲು ಹೊರಟಿರುವುದರಿಂದ ಮಹಾತ್ಮನ ಪುಣ್ಯತಿಥಿಯನ್ನು ಪ್ರತಿ ವಾರ್ಡ್‌ಗಳಲ್ಲಿ ಜನರ ಬಳಿಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಣುಕ, ಮಹಮದ್ ಉಸ್ಮಾನ್, ಚಾಂದ್‌ಪೀರ್, ಇನ್ನು ಅನೇಕರು ಪುಣ್ಯತಿಥಿಯಲ್ಲಿ ಪಾಲ್ಗೊಂಡಿದ್ದರು.

