ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕಲ್ಪತರು ನಾಡಿನಲ್ಲಿ ಬೃಹತ್ ತಿರಂಗಾ ಯಾತ್ರೆ”. ಆಪರೇಷನ್‌ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಕಲ್ಪತರು ನಾಡು, ಸಿದ್ದಗಂಗಾ ಶ್ರೀಗಳ ಪುಣ್ಯಭೂಮಿ ತುಮಕೂರಿನಲ್ಲಿಂದು ಬೃಹತ್ ತಿರಂಗಾ ಯಾತ್ರೆ ನಡೆಸಿ ದೇಶದ ಯೋಧರಿಗೆ ನೈತಿಕ ಸ್ಥೈರ್ಯ ತುಂಬುವ ಮೂಲಕ ಬೆಂಬಲ ಸೂಚಿಸಲಾಯಿತು.
ತುಮಕೂರು ನಗರಾದ್ಯಂತ ಸಾಗಿದ ಬೃಹತ್ ತಿರಂಗಾ ಯಾತ್ರೆಯಲ್ಲಿ ನಿವೃತ್ತ ಯೋಧರು, ವಕೀಲರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಹಸ್ರಾರು ಕಾರ್ಯಕರ್ತರುಗಳ ನೇತೃತ್ವದಲ್ಲಿ ವಂದೇ ಮಾತರಂ ಜಯಘೋಷ ಮೊಳಗಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಉಗ್ರ ರಕ್ಕಸರ ವಿರುದ್ಧದ ಬೃಹತ್ ಕಾರ್ಯಾಚರಣೆ ಆಪರೇಷನ್ ಸಿಂಧೂರದ ಮೂಲಕ ಉಗ್ರರನ್ನು ಸದೆಬಡಿದಿರುವ ವೀರ ಯೋಧರಿಗೆ ನೈತಿಕ ಸ್ಥೈರ್ಯ ಹಾಗೂ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಯವರು ಯುದ್ಧ ಆರಂಭವಾಗುವ ಮುನ್ನವೇ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಉಗ್ರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿರುವ ಹಿನ್ನೆಲೆಯಲ್ಲಿ ಮುಂದಿನ ಎಲ್ಲಾ ಕಾರ್ಯಾಚರಣೆಗೂ ಬೆಂಬಲ ನೀಡುವ ದೃಷ್ಟಿಯಿಂದ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕೆಂಬ ಸಂಕಲ್ಪ ಮಾಡಲಾಯಿತು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಯೋಧರು, ನಿವೃತ್ತ ಯೋಧರು, ಮಾಜಿ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ಡಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ್, ಮಸಾಲಾ ಜಯರಾಂ, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿ.ಸಿ. ಹನುಮಂತೇಗೌಡ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ವಿನಯ್ ಬಿದಿರೆ, ಮುಖಂಡರಾದ ಡಾ.ಪರಮೇಶ್, ಚಿದಾನಂದಗೌಡ, ಸೇರಿದಂತೆ ಪಕ್ಷದ ಪ್ರಮುಖರು, ಸಾರ್ವಜನಿಕರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.