ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಘಟನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಮೇಲ್ನೋಟಕ್ಕೆ ಜವಾಬ್ದಾರಿ ನಿರ್ವಹಿಸಿಲ್ಲದವರ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ಅರಸು ಪ್ರತಿಮೆಗೆ ಮಾಲಾರ್ಪಣೆ:
ಇದೇ ವೇಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನ ವಿಧಾನಸೌಧದ ಪಶ್ಚಿಮ ದ್ವಾರದ ಮುಂಭಾಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 43ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜ್ಯ ಕಂಡಂತಹ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರು. ಬಡವರು, ಅನ್ಯಾಯ, ತುಳಿತಕ್ಕೊಳಗಾದವರು ಹಾಗೂ ಅವಕಾಶಗಳಿಂದ ವಂಚಿತರಾದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಕರ್ನಾಟಕ ರಾಜ್ಯದಲ್ಲಿ ಅರಸು ಅವರಿಂದಾಗಿ ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿದವು. ರಾಜಕೀಯದಲ್ಲಿ ಅವಕಾಶ ಸಿಗದ ಜನಾಂಗದವರಿಗೆ ಪ್ರಾತಿನಿಧ್ಯ ದೊರಕಿಸಿಕೊಟ್ಟರು. ಹಾವನೂರು ಆಯೋಗ ರಚನೆ ಮಾಡಿ, ಅದರ ವರದಿ ಪಡೆದು ಜಾರಿ ಮಾಡಿ ಉದ್ಯೋಗದಲ್ಲಿ ಮೀಸಲಾತಿ ನೀಡಿದರು ಎಂದು ತಿಳಿಸಿದರು.
ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆ ಇಟ್ಟು ನಿರ್ಗತಿಕರು, ಭೂ ರಹಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರು. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿ ಭೂರಹಿತರನ್ನು ಭೂ ಒಡೆಯರಾಗಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಜೀತ ಪದ್ಧತಿ ರದ್ದು ಮಾಡಿದಲ್ಲದೆ ಮಲ ಹೊರುವ ಪದ್ಧತಿ ನಿಲ್ಲಿಸಿದರು. ಅವರ ಕಾರ್ಯಕ್ರಮಗಳ ಉದ್ದನೆಯ ಪಟ್ಟಿಯೇ ಇದೆ. ದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಎಂದು ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ರಾಜ್ಯ ಎಂದಿದ್ದ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ ಮುತ್ಸದ್ದಿ, ಜನಪರವಾದ ಕಾಳಜಿ, ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯಿರುವ ರಾಜಕಾರಣಿಯನ್ನು ಸರ್ಕಾರ ಸ್ಮರಿಸಿದೆ. ಅವರು ಮಾಡಿರುವ ಕೆಲಸಗಳು ನಮಗೆ ಸ್ಫೂರ್ತಿ ಮತ್ತು ಪ್ರೇರಣೆ. ನಮ್ಮ ಸರ್ಕಾರ ಅವರಿಂದ ಸ್ಪೂರ್ತಿ ಪಡೆದು ಸಾಮಾಜಿಕ ನ್ಯಾಯದೆಡೆಗೆ ದೃಢವಾದ ಹೆಜ್ಜೆಗಳನ್ನು ಇರಿಸಿದ್ದೇವೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.