ಸಿದ್ದರಾಮಯ್ಯ ಕೆಳಗಿಳಿಸಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅಹಿಂದಾ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಕೇಂದ್ರ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ
, ರಾಜ್ಯಪಾಲರ ನಡೆ ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಗರಸಭೆ ಸಮೀಪವಿರುವ ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಧರಣಿ ನಡೆಸಲಾಯಿತು.

ತೋಳಿಗೆ ಕಪ್ಪುಪಟ್ಟಿ ಧರಿಸಿದ್ದ ಪ್ರತಿಭಟನಾಕಾರರು ಬಿಜೆಪಿ. ಹಾಗೂ ಜೆಡಿಎಸ್. ವಿರುದ್ದ ಧಿಕ್ಕಾರಗಳನ್ನು ಕೂಗಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಧರಣಿಯನ್ನುದ್ದೇಶಿಸಿ ಮಾತನಾಡಿ ಐದು ಉಚಿತ ಗ್ಯಾರೆಂಟಿಗಳನ್ನು ರಾಜ್ಯದ ಜನತೆಗೆ ನೀಡಿ ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮ್ಯನವರಿಗೆ ವಿನಾ ಕಾರಣ ತೊಂದರೆ ಕೊಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಷಡ್ಯಂತ್ರ ನಡೆಸುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಕಾನೂನು ಮತ್ತು ಮಾನವೀಯತೆ ಎರಡು ಸಮನಾಗಿದೆ. ೯೯ ಅಪರಾಧಿಗಳಿಗೆ ಶಿಕ್ಷೆಯಾಗಲಿ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು. ಶೋಷಿತ ಸಮುದಾಯ ಹಾಗೂ ಅಹಿಂದ ಜಾತಿಗಳು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ ಎಂದು ಹೇಳಿದರು.

ಮೂಡಾ, ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲದಿದ್ದರೂ ಕೋಮುವಾದಿ ಬಿಜೆಪಿ.ಯವರು ಎಲ್ಲಿ ತಮ್ಮ ಹಗರಣಗಳು ಬಯಲಾಗುತ್ತವೋ ಎನ್ನುವ ಆತಂಕದಿಂದ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ಕೊಡುತ್ತಿದ್ದಾರೆ. ಕಾನೂನು ರೀತಿಯ ಹೋರಾಟದಲ್ಲಿ ಸಿದ್ದರಾಮಯ್ಯನವರು ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ ಬಿಜೆಪಿ. ಜೆಡಿಎಸ್.ನವರ ಕುತಂತ್ರದಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರದಲ್ಲಿದ್ದಾಗ ವಿರೋಧಿಗಳು ಎಲ್ಲರ ಮೇಲೂ ಆರೋಪ ಹೊರಿಸುವುದು ಸಹಜ.

ಅದೇ ರೀತಿ ಈಗಿನ ಮುಖ್ಯಮಂತ್ರಿಯ ವಿರುದ್ದವೂ ಪಿತೂರಿ ನಡೆಯುತ್ತಿದೆ. ರಾಜ್ಯದ ಜನತೆಗೆ ನೀಡಿರುವ ಉಚಿತ ಗ್ಯಾರೆಂಟಿಗಳು ವಿರೋಧ ಪಕ್ಷದವರಿಗೆ ಕಣ್ಣುರಿಯಾಗಿದೆ. ಕಾನೂನು ಹೋರಾಟದಿಂದ ಎಲ್ಲವೂ ಸುಖ್ಯಾಂತಗೊಳ್ಳುತ್ತದೆ ಎಂದು ತಿಳಿಸಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್ ಧರಣಿಯನ್ನುದ್ದೇಶಿಸಿ ಮಾತನಾಡುತ್ತ ಕೇಂದ್ರ ಬಿಜೆಪಿ. ಮತ್ತು ಜೆಡಿಎಸ್. ಸೇರಿಕೊಂಡು ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿರುಕುಳ ಕೊಡುತ್ತಿದೆ. ವಿಧಾನಸಭೆ ಚುನಾವಣಾ ಪೂರ್ವದಲ್ಲಿಯೇ ನೀಡಿದ ಭರವಸೆಯಂತೆ ಎಲ್ಲಾ ಗ್ಯಾರೆಂಟಿಗಳನ್ನು ಜಾರಿಗೆ ತಂದಿರುವುದು ಎದುರಾಳಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.

ದೇಶದ ಯಾವ್ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಅಲ್ಲೆಲ್ಲಾ ಪ್ರಧಾನಿ ಮೋದಿ ಖ್ಯಾತೆ ಮಾಡುತ್ತಿರುವುದೆ ಸಾಧನೆಯಾಗಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲರನ್ನು ಜೈಲಿಗೆ ಕಳಿಸಿದರು. ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಅಸ್ಥಿತರಗೊಳಿಸಿ ವಾಮ ಮಾರ್ಗದಲ್ಲಿ ಬಿಜೆಪಿ. ಅಧಿಕಾರ ಹಿಡಿಯುತ್ತಿದೆ. ಮಹಾರಾಷ್ಟ್ರದಲ್ಲಿ ಬಹುಮತವಿದ್ದ ಕಾಂಗ್ರೆಸ್ ಸರ್ಕಾರವನ್ನು ಕೆಡವಿದ ಬಿಜೆಪಿ. ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಎಚ್ಚರಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಉಳಿಯಬೇಕಾದರೆ ಕೇಂದ್ರ ಎನ್‌ಡಿಎ. ಸರ್ಕಾರವನ್ನು ಕಿತ್ತೊಗೆಯಬೇಕು. ಯಾವ ತಪ್ಪು ಮಾಡದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕೆ ರಾಜಿನಾಮೆ ಕೊಡಬೇಕು. ಅಹಿಂದ, ಶೋಷಿತ ಸಮುದಾಯಗಳು ಘೋರ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಹೇಳಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಮಂಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಮಂಜುನಾಥ್, ಎಸ್ಸಿ. ವಿಭಾಗದ ಉಪಾಧ್ಯಕ್ಷ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತನಂದಿನಿಗೌಡ, ಮೃತ್ಯುಂಜಯ, ಮಾಳೇಶ್, ನಿವೃತ್ತ ಡಿವೈಎಸ್ಪಿ. ಅಬ್ದುಲ್‌ರೆಹಮಾನ್, ಸೈಯದ್‌ಖುದ್ದೂಸ್, ಮುದಸಿರ್ ನವಾಜ್, ಪ್ರಕಾಶ್‌ರಾಮನಾಯ್ಕ, ಅಶೋಕ್‌ನಾಯ್ಡು, ಸುರೇಶ್‌ಬಾಬು, ರಘು, ವಸೀಂ ಬಡಾಮಕಾನ್, ಮೆಹಬೂಬ್‌ಖಾನ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಲೋಕೇಶ್ ಇನ್ನು ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";