ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡಲು ತಯಾರಿ ಮಾಡಿಕೊಂಡಿವೆ.
ಖಾಸಗಿ ಹೋಟೆಲ್ನಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಜೆಡಿಎಸ್- ಬಿಜೆಪಿ ಸಮನ್ವಯ ಸಮಿತಿ ಸಭೆ ಕರೆದು ಚರ್ಚಿಸಲಾಗಿದೆ.
ಬಜೆಟ್ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಉಭಯ ಪಕ್ಷಗಳ ಮುಖಂಡರು ಸುಮಾರು ಎರಡು ಗಂಟೆಗಳ ಕಾಲ ಸಮಾಲೋಚನೆ ಮಹತ್ವದ ವಿಷಯ ಕುರಿತು ಚರ್ಚಿಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸಮನ್ವಯ ಸಮಿತಿ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಅಧಿವೇಶನದಲ್ಲಿ ಹೋರಾಟ ಮಾಡಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೋಮುಗಲಭೆ, ಕೊಲೆ, ಅತ್ಯಾಚಾರಗಳು ಹೆಚ್ಚಾಗಿದೆ. ಮೈಸೂರಿನಲ್ಲಿ ಇತ್ತೀಚೆಗೆ ಮುಸ್ಲಿಮರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮೈಕ್ರೋ ಫೈನಾನ್ಸ್ಗಳ ಸಾಲದ ಹೊರೆಯಿಂದಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಲಂಚ ನೀಡಿ ಪಾಸಾಗಬೇಕಾದ ಸ್ಥಿತಿ ಬಂದಿದೆ ಎಂದು ದೂರಿದರು.
ಕೆಪಿಎಸ್ಸಿಯಲ್ಲಿ ಕನ್ನಡದ ಕೊಲೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು ಎಂಬುದನ್ನು ಮರೆತಿದ್ದಾರೆ. ಬಿಜೆಪಿ ಸರ್ಕಾರ ರೈತ ಸ್ನೇಹಿಯಾಗಿದ್ದರೆ, ಕಾಂಗ್ರೆಸ್ ನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಎಲ್ಲೆಲ್ಲೂ ಗುಂಡಿ ಬಿದ್ದಿರುವ ರಸ್ತೆಗಳು, ಕಸದ ರಾಶಿ ಕಂಡುಬರುತ್ತಿದೆ. ಇವೆಲ್ಲ ಸಮಸ್ಯೆಗಳ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡಲಾಗುವುದು ಎಂದು ಅಶೋಕ್ ಎಚ್ಚರಿಸಿದರು.
ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಸಂಸದರಾದ ತೇಜಸ್ವಿಸೂರ್ಯ, ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಶಾಸಕರಾದ ಗೋಪಾಲಯ್ಯ, ಎಸ್.ಆರ್.ವಿಶ್ವನಾಥ್, ಮುನಿರತ್ನ, ಸಿ.ಕೆ.ರಾಮಮೂರ್ತಿ, ಎಂ.ಕೃಷ್ಣಪ್ಪ, ರವಿ ಸುಬ್ರಮಣ್ಯ, ಬೈರತಿ ಬಸವರಾಜ್, ಉದಯ ಗರುಡಾಚಾರ್, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಬೋಜೇಗೌಡ ಮತ್ತಿತರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.