ಪೋಸ್ಟರ್ ಅಭಿಯಾನ ನಡೆಸಿದ ಬಿಜೆಪಿ ನಾಯಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಹಲವು ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ನಾಯಕರು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿ ಪೋಸ್ಟರ್ ಅಭಿಯಾನ ನಡೆಸಿದರು.

ಬೀದರ್ ಗುತ್ತಿಗೆದಾರ ಸಚಿನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹೋರಾಟನ್ನು ತೀವ್ರಗೊಳಿಸಿದ್ದಾರೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ರವಿಕುಮಾರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರ ಸಚಿನ್ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೊಣೆ ಹೊರಬೇಕು ಎಂದು ಘೋಷಣೆ ಕೂಗಿ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದರು.

ಇದೊಂದು ಭ್ರಷ್ಟ, ಕೊಲೆಗೆಡುಕ ಸರ್ಕಾರ. ಏನೇ ಮಾಡಿದರೂ ತಮ್ಮನ್ನು ಯಾರು ಕೇಳುವುದಿಲ್ಲ ಎಂದುಕೊಂಡಿದ್ದಾರೆ. ಗುತ್ತಿಗೆದಾರರನ ಡೆತ್‌ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರ ಹೆಸರು ಇದೆ. ಇದಕ್ಕೆ ಸಚಿವರೇ ಜವಾಬ್ದಾರರು ಎಂದು ಬಿಜೆಪಿ ನಾಯಕರು ಆರೋಪಿಸಿದರು.

ಬಿಜೆಪಿ ನಾಯಕರು ಮುಂದುವರೆದು ಸಚಿವ ಪ್ರಿಯಾಂಕ್ ಖರ್ಗೆ ಸುಪಾರಿ ಸ್ಪಾನ್ಸರ್ ಎಂಬ ಪೋಸ್ಟರ್‌ಅನ್ನು ಹಲವು ಕಡೆಗಳಲ್ಲಿನ ಗೋಡೆಗಳಿಗೆ ಅಂಟಿಸಿ  ಸಚಿವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಸೂಸೈಡ್ ಹಾಗೂ ಸುಪಾರಿ ಭಾಗ್ಯ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎನ್ನುವ ಪೋಸ್ಟರ್‌ಗಳನ್ನು ಗೋಡೆಗಳಿಗೆ ಅಂಟಿಸಿ ಬಿಜೆಪಿ ಕಾಯರ್ತರು ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ
, ಲಕ್ಷ್ಮೀ ಹೆಬ್ಬಾಳ್ಕರ್, ನಾಗೇಂದ್ರ ಅವರ ಫೋಟೋ ಪೋಸ್ಟರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆತ್ಮಹತ್ಯೆ ಭಾಗ್ಯ, ಸುಪಾರಿ ಭಾಗ್ಯದ ಗ್ಯಾರೆಂಟಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರಣಿ ಆತ್ಮಹತ್ಯೆ ಪ್ರಕರಣಗಳು, ಬಾಣಂತಿಯರು ಸರಣಿ ಸಾವುಗಳು, ಗುತ್ತಿಗೆದಾರ ಸಚಿನ್ ಸೇರಿದಂತೆ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ ಎಂದು ಆರೋಪಿಸಿದರು.

ಗುತ್ತಿಗೆದಾರ ಸಚಿನ್ ಅವರ ಆತ್ಮಹತ್ಯೆ ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಹತ್ಯೆ. ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಬರೆದಿಟ್ಟರೂ, ಪ್ರಿಯಾಂಕ್‌ಖರ್ಗೆ ಅವರ ಆಪ್ತ, ಕೊಲೆಗಾರ ರಾಜು ಕಪನೂರನ್ನು ಬಂಧಿಸದಿರುವುದು ನೋಡಿದರೆ ಕಾಂಗ್ರೆಸ್ ಸರ್ಕಾರ ಕೊಲೆಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ ಸಾಕ್ಷಿ.

ಸಿಎಂ ಸಿದ್ದರಾಮಯ್ಯನರೇ ಕೊಲೆಗಡುಕ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ, ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದರು.

ಗುತ್ತಿಗೆದಾರ ಸಚಿನ್‌ಆತ್ಮಹತ್ಯೆಗೆ ಕಾರಣರಾದ ಪ್ರಿಯಾಂಕ್‌ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಗುತ್ತಿಗೆದಾರ ಸಚಿನ್ ಅವರ ಸಾವಿಗೆ ನ್ಯಾಯ ಸಿಗುವವರೆಗೆ ರಾಜ್ಯಾದ್ಯಂತ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";