ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂವಿಧಾನ ಬಾಹಿರ ಕ್ರಮಗಳ ಮೂಲಕ ಅಮಾನತ್ತಿನಲ್ಲಿಟ್ಟಿರುವ ಬಿಜೆಪಿಯ 18 ಶಾಸಕರ ಅಮಾನತು ಆದೇಶ ತಕ್ಷಣದಿಂದಲೇ ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಮತ್ತಿತರ ಶಾಸಕರು, ಬಿಜೆಪಿ ನಾಯಕರು ವಿಧಾನಸಭಾಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯು.ಟಿ.ಖಾದರ್ ವಿರುದ್ಧ ಧಿಕ್ಕಾರ ಕೂಗಿ 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ, ಸುನಿಲ್ ಕುಮಾರ್ ಸೇರಿ ಅಮಾನತುಗೊಂಡ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಸ್ಪೀಕರ್ ಕಛೇರಿಗೆ ತೆರಳಿ ಅಮಾನತು ಆದೇಶ ವಾಪಸ್ ಪಡೆಯುವಂತೆ ಮನವಿಸಲ್ಲಿಸಲಾಯಿತು. ಮನವಿ ಪತ್ರದಲ್ಲಿ ಬಿಜೆಪಿ ನಿಯೋಗ, ಕೂಡಲೇ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ತಾವು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಜನರಿಂದ ನೇರವಾಗಿ ಆಯ್ಕೆಗೊಂಡ 18 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಜನಸಾಮಾನ್ಯರು, ನಾಗರೀಕ ಸಮಾಜದ ಕ್ಷಮೆಯಾಚಿಸಬೇಕು. ಅಲ್ಲದೇ ಸಂವಿಧಾನ ಬದ್ಧನಾಗಿ, ಪಕ್ಷಪಾತ ರಹಿತನಾಗಿ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣ ವಚನ ಮಾಡಿರುವ ತಾವು ಭಾರತ ಸಂವಿಧಾನದ ಕ್ಷಮೆ ಯಾಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ರಾಜ್ಯ ಸರ್ಕಾರ ಹಿರಿಯ ಮಂತ್ರಿಯಾಗಿರುವ ಕೆ.ಎನ್.ರಾಜಣ್ಣನವರೇ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸದನದ ಒಳಗಡೆ ತನ್ನದೇ ಸರ್ಕಾರದವರ ಎದುರು ಹನಿಟ್ರ್ಯಾಪ್ ಆಗಿರುವ ವಿಷಯ ಪ್ರಸ್ತಾಪಿಸಿದ್ದಾರೆ. ಇದನ್ನು ಕೂಡಲೇ ಸಿಬಿಐಗೆ ವಿಸ್ತೃತ ತನಿಖೆಗೆ ವಹಿಸುವಂತೆ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕೆಂದು ಮನವಿ ಮಾಡಿಕೊಂಡಿದೆ.
ರಾಜ್ಯ ಸರ್ಕಾರದಿಂದಲೇ ಪ್ರಾಯೋಜಿತಗೊಂಡು ನಡೆಯುತ್ತಿರುವ ಅಕ್ರಮಗಳು, ಅನೈತಿಕ ಚಟುವಟಿಕೆಗಳು ನಾಡಿನ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಅಕ್ರಮ, ಅನೈತಿಕ ಕಾರ್ಯಗಳು ಸರ್ಕಾರದ ಮಹತ್ವದ ವ್ಯಕ್ತಿಗಳಿಂದಲೇ ಜರುಗುತ್ತಿದ್ದರೂ ಬಗ್ಗೆ ನಾಡಿನ ಜನರೆದುರು ಸತ್ಯಾ-ಸತ್ಯತೆ ಹೊರತರುವ ಸಂವಿಧಾನ ಬದ್ಧವಾಗಿ ವಿಪಕ್ಷಗಳಿಗೆ ದೊರೆತಿರುವ ಪ್ರತಿಭಟನೆಯ ಹಕ್ಕು ಪುಯತ್ನವಾಗಿ ಕೇಳುತ್ತಿರುವ ಪ್ರಶ್ನೆಗಳ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ಸಭಾಧ್ಯಕ್ಷರಾದ ನೀವೇ ಮೊದಲಿಗರಾಗಿ ನಿಂತಂತೆ ಕಾಣುತ್ತಿದೆ. ಸರ್ಕಾರಕ್ಕೆ ಸದನದಲ್ಲಿ ಸಾಮಾನ್ಯವಾಗಿ ಬಹುಮತ ಇದ್ದೇ ಇರುತ್ತದೆ. ಆದರೆ ಇದೇ ಬಹುಮತವನ್ನು ವಿರೋಧ ಪಕ್ಷಗಳ ಧ್ವನಿ ಅಡಗಿಸಿ, ಅಮಾನತು ಮಾಡುವ ಕ್ರಮಗಳಿಗೆ ನೀವು ದುರುಪಯೋಗಪಡಿಸಿಕೊಂಡಿರುವುದನ್ನು ಜನ ನೋಡುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.