ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟನಲ್(ಸುರಂಗ ಮಾರ್ಗ) ಯೋಜನೆ ವಿರೋಧಿಸಿ ರಾಜ್ಯ ಬಿಜೆಪಿ ವತಿಯಿಂದ ಬೆಂಗಳೂರಿನ ಲಾಲ್ಬಾಗ್ನಲ್ಲಿ ಜನಜಾಗೃತಿ ಅಭಿಯಾನ ನಡೆಯಿತು.
ರಾಜ್ಯ ಸರ್ಕಾರದ ಟನಲ್ ಯೋಜನೆ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಇಂದು ಲಾಲ್ಬಾಗ್ನಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು.
ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ಟನಲ್ ವಿಚಾರವಾಗಿ ಸಾರ್ವಜನಿಕರ ಜೊತೆ ಟನಲ್ ಅಪಾಯ ಕುರಿತು ಚರ್ಚೆ ನಡೆಸಿದರು.
ಬಿಜೆಪಿ ನಾಯಕ ಆರ್. ಅಶೋಕ್ ಮಾತನಾಡಿ, ಟನಲ್ ಯೋಜನೆಗೆ 120 ಡಿಪಾರ್ಟ್ಮೆಂಟ್ ನಿಂದ ಅನುಮತಿ ಬೇಕು. ಆದರೆ ಒಂದೂ ಇಲಾಖೆಯ ಅನುಮತಿ ತೆಗೆದಿಲ್ಲ ಆರೋಪಿಸಿದರು.
ಬಿಹಾರ, ತಮಿಳುನಾಡು ಚುನಾವಣೆಗಾಗಿ ಮತ್ತು ಹಣ ಲೂಟಿ ಮಾಡಲು ಟನಲ್ ಯೋಜನೆಗೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ಬೆಂಗಳೂರಿನಲ್ಲಿರುವ ಪಾರ್ಕ್, ಕೆರೆ, ಕಟ್ಟೆಗಳನ್ನು ಹುಡುಕುತ್ತಿದ್ದು ಇದು ಮನೆಹಾಳು ಕೆಲಸ ಅಲ್ವಾ? ಎಂದು ಅಶೋಕ್ ಟೀಕಾಪ್ರಹಾರ ಮಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿರುವವರು ಕೆಂಪೇಗೌಡರ ಆಶಯಕ್ಕೆ ಕೊಳ್ಳಿ ಇಡ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ಆಗ್ಬೇಕು. ಲಾಲ್ ಬಾಗ್ ಬೆಂಗಳೂರಿನ ಶ್ವಾಸಕೋಶ ಇದ್ದಹಾಗೆ. ಮೊದಲು ಬೆಂಗಳೂರಿನಲ್ಲಿರುವ ಗುಂಡಿ ಮುಚ್ಚಿ, ನಂತರ ಚಂದ್ರಲೋಕಕ್ಕೆ ಟನಲ್ ಮಾಡಿ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಅಶ್ವತ್ಥ ನಾರಾಯಣ ಅವರು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಸಹಿ ಸಂಗ್ರಹಿಸಿದರು.
ಇದೇ ವೇಳೆ, ಜಿಬಿಎ ಮುಖ್ಯ ಇಂಜಿನಿಯರ್ ಹಾಗೂ ಲಾಲ್ಬಾಗ್ ಜಂಟಿ ನಿರ್ದೇಶಕರಿಂದ ಮಾಹಿತಿ ಪಡೆದ ಅಶೋಕ್, ಆರು ಎಕರೆ ಬಳಸಿಕೊಂಡರೆ ಇದು ಮಾರ್ಕೆಟ್ ಆಗುವುದಿಲ್ಲವೇ?. ಮುಂದೆ ನಾವೂ ಇರಲ್ಲ, ನೀವೂ ಇರಲ್ಲ. ಆದ್ರೆ ನಾವು ಮಾಡುವ ಆದೇಶ ಉಳಿದುಕೊಳ್ಳುತ್ತದೆ. ಬೆಂಗಳೂರಿಗೆ ಯಾರು ಬಂದರೂ ಮೊದಲು ನೋಡುವುದೇ ಲಾಲ್ಬಾಗ್, ವಿಧಾನಸೌಧ ಎಂದು ತಿಳಿಸಿದರು.
ಬೆಂಗಳೂರಿನ ಪರಿಸರಪ್ರೇಮಿಗಳ ಇತಿಹಾಸ ಹೊಂದಿರುವ ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಬೆಂಗಳೂರಿನ ಜನ ನಿದ್ದೆಗೆಡುವಂತಾಗಿದೆ. 18 ಕಿ.ಮೀ ಟನಲ್ ರಸ್ತೆ ನಿರ್ಮಾಣವಾದರೆ ಟ್ರಾಫಿಕ್ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದರೆ ಮಾಡಿ, ನಾವು ಬೆಂಬಲ ಕೊಡುತ್ತೇವೆ ಎಂದು ಅಶೋಕ್ ಹೇಳಿದರು.
ನಗರದಲ್ಲಿ 70% ದ್ವಿಚಕ್ರ ವಾಹನಗಳಿವೆ. ಕೇವಲ 10% ಜನರಿಗಾಗಿ ಟನಲ್ ರಸ್ತೆ ಮಾಡುತ್ತಿದ್ದೀರಿ. ಬೈಕ್, ಸೈಕಲ್ಗಳಿಗೆ ಆ ರಸ್ತೆಗೆ ಪ್ರವೇಶವಿಲ್ಲ. ಕೇವಲ ಕಾರುಗಳಿಗೆ ಮಾತ್ರ ಪ್ರವೇಶ ಎನ್ನುತ್ತಿದ್ದೀರಿ. ಆ ಟನಲ್ ರಸ್ತೆಯಲ್ಲಿ ಟ್ರಾವೆಲ್ ಮಾಡಿದರೆ 16-20 ಸಾವಿರ ರೂಪಾಯಿ ತಿಂಗಳಿಗೆ ಖರ್ಚು ಮಾಡಬೇಕು. ಅಷ್ಟು ಖರ್ಚು ಮಾಡಿ ಇಎಂಐ ಕಟ್ಟಿದರೆ ಒಂದು ಬೆಂಜ್ ಕಾರೋ ಮೂರು ಬೆಡ್ ರೂಂನ ವಿಲ್ಲಾ ಖರೀದಿಸಿಬಿಡಬಹುದು. ಇದು ಟ್ವಿನ್ ಟನಲ್ ರಸ್ತೆಯಲ್ಲ, ವಿಐಪಿ ಕಾರಿಡಾರ್ ಆಗುತ್ತೆ. ಟನಲ್ ರಸ್ತೆ ಯೋಜನೆಗೂ ಮುನ್ನ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ಎಂದು ಸಲಹೆ ನೀಡಿದರು.
ಟನಲ್ ಯೋಜನೆಗಾಗಿ 1 ಕಿ.ಮೀಟರಿಗೆ 1,285 ಕೋಟಿ ರೂ ಖರ್ಚಾಗುತ್ತಿದೆ. ಇಸ್ರೋದ ಮಂಗಳಯಾನವೇ ಇದಕ್ಕಿಂತಲೂ ಕಡಿಮೆ ಬಜೆಟ್ನಲ್ಲಿ ಆಗಿದೆ. ಈಗ ಈ ದುಬಾರಿ ಯೋಜನೆಗಾಗಿ ಸಾಲ ಮಾಡಲು ಹೊರಟಿದ್ದಾರೆ. ಆ ಸಾಲಕ್ಕೆ ಬಡ್ಡಿ ಎಲ್ಲಿಂದ ಕೊಡುತ್ತೀರಿ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳುವ ಯೋಜನೆಯಿದು. ಸೌಖ್ಯವಾಗಿರಲಿ ಎಂದು ಕೆಂಪೇಗೌಡರು ಶಿಲೆಗಳ ಮೇಲೆ ಬೆಂಗಳೂರು ನಗರ ಕಟ್ಟಿದ್ದಾರೆ, ಇಲ್ಲಿ ಭೂಕಂಪಗಳು ಆಗುವುದಿಲ್ಲ. ಆದರೆ ಈ ಯೋಜನೆಯ ಮೂಲಕ 3 ಸಾವಿರ ದಶ ಲಕ್ಷ ಶಿಲೆಗಳಿರುವ ಭೂಮಿಯ ಆಳವನ್ನ ಕೊರೆಯಲು ಹೊರಟಿದ್ದೀರಿ. ಲಾಲ್ಬಾಗ್ನಲ್ಲಿ ಕಾನೂನಿನ ಬಗ್ಗೆ ರಾಜ್ಯ ಸರ್ಕಾರವೇ ಬೋರ್ಡ್ ಹಾಕಿ ತಾನೇ ಕೊಲೆ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬೆಂಗಳೂರಿನಲ್ಲಿ 12% ಜನರ ಬಳಿ ಮಾತ್ರ ಕಾರುಗಳಿವೆ. ಟನಲ್ ರಸ್ತೆಯನ್ನು ಶ್ರೀಮಂತರಿಗಾಗಿ ಮಾಡಲಾಗುತ್ತಿದೆ. ಬೆಂಗಳೂರು ಜನರ ವಿರೋಧ ಇದು. ನಾವು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಕೋರ್ಟ್ ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಹೇಗೆ ಉತ್ತರ ಕೊಡಲಿದ್ದಾರೋ ನೋಡಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಶಾಸಕರುಗಳಾದ ರವಿ ಸುಬ್ರಹ್ಮಣ್ಯ, ಬಿ.ಉದಯ ಗರುಡಾಚಾರ್, ಸಿ.ಕೆ.ರಾಮಮೂರ್ತಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.

