ನಾಚಿಕೆ-ಮರ್ಯಾದೆ ಇಲ್ಲದೆ ಬೀದಿಗಿಳಿದು ಹೋರಾಟ ಮಾಡುವ ಬಿಜೆಪಿ ನಾಯಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಪ್ ಆಸ್ತಿ ವಿಚಾರದಲ್ಲಿ ಕರ್ನಾಟಕ ಬಿಜೆಪಿ ಪಕ್ಷದ ಆತ್ಮವಂಚನೆಯ ನಡವಳಿಕೆ ಮತ್ತೆ ಮತ್ತೆ ಬಯಲಾಗುತ್ತಿದ್ದರೂ ಕನಿಷ್ಠ ನಾಚಿಕೆ-ಮರ್ಯಾದೆ ಇಲ್ಲದೆ ಬೀದಿಗಿಳಿದು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಆ ಪಕ್ಷದ  ರಾಜಕೀಯ ದಿವಾಳಿತನ ಮತ್ತು ಹತಾಶ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಣ ರಾಜಕೀಯದಿಂದ ಒಡೆದುಹೋಗಿರುವ ರಾಜ್ಯ ಬಿಜೆಪಿಯ ನಾಯಕರು ಪ್ರತಿಭಟನೆಯನ್ನು ನಡೆಸುತ್ತಿರುವುದು ವಕ್ಪ್ ಆಸ್ತಿ ರಕ್ಷಣೆಗೆ ಅಲ್ಲ, ಇದು ಬೀದಿಪಾಲಾಗಿರುವ ತಮ್ಮ ಮಾನರಕ್ಷಣೆಗೆ ಎನ್ನುವುದನ್ನು ರಾಜ್ಯದ ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.

ವಕ್ಪ್ ಆಸ್ತಿ ಸಂರಕ್ಷಣೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ನೋಟಿಸ್ ನೀಡಿರುವುದು ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎನ್ನುವುದನ್ನು ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಅಧ್ಯಕ್ಷತೆಯ ವಿಧಾನ ಮಂಡಲದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯೇ ವರದಿ ನೀಡಿರುವುದನ್ನು ಪತ್ರಿಕೆಯೊಂದು ವರದಿ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.

ತನ್ನ ಬಣ್ಣ ಬಯಲಾದ ನಂತರವಾದರೂ ಬುದ್ದಿ ಕಲಿತು ಈ ಪ್ರತಿಭಟನೆಯ ನಾಟಕವನ್ನು ನಿಲ್ಲಿಸಿ ತಮ್ಮ ಮಾನ-ಮರ್ಯಾದೆಯನ್ನು ಉಳಿಸಿಕೊಳ್ಳಬೇಕೆಂದು ಬಿಜೆಪಿಯವರಿಗೆ ಸಿಎಂ ಸಲಹೆ ನೀಡಿದ್ದಾರೆ.

ಇಂತಹ ಸುಳ್ಳು ಆರೋಪ ಮತ್ತು ಅಪಪ್ರಚಾರಕ್ಕೆ ಸರಿಯಾದ ಶಿಕ್ಷೆಯನ್ನು ಇತ್ತೀಚಿನ ಉಪಚುನಾವಣೆಯಲ್ಲಿ ರಾಜ್ಯದ ಜಾಗೃತ ಮತದಾರರು ನೀಡಿದ್ದಾರೆ. ಇದರಿಂದಲೂ ಬುದ್ದಿ ಕಲಿಯದೆ ಇದ್ದರೆ ರಾಜ್ಯದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ವಿರೋಧಪಕ್ಷದಲ್ಲಿಯೇ ಕೂರಿಸುವುದು ಖಚಿತ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";