ಏ.2 ರಂದು ಬೆಲೆ ಏರಿಕೆ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಬಿಜೆಪಿ ಏಪ್ರಿಲ್​
2ರಿಂದ ಫ್ರೀಡಂ ಪಾರ್ಕ್​​ನಲ್ಲಿ ಬೆಲೆ ಏರಿಕೆ ನೀತಿ ಖಂಡಿಸಿ ಅಹೋರಾತ್ರಿ ಧರಣಿ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ನಗರದ ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್‌ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಏಪ್ರಿಲ್‌2 ರಂದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಯಲಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಭಟನೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವ ದುಃಸ್ಥಿತಿ ನಾಡಿನ ಜನರಿಗೆ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ. ಅಧಿಕಾರ ನೀಡಿದ ಮತದಾರರಿಗೆ ಈ ಸರ್ಕಾರ ಶಾಪಗ್ರಸ್ಥವಾಗಿದೆ ಎಂದು ಹೇಳಿದರು.
ವಿದ್ಯುತ್ ಯೂನಿಟ್​ಗೆ
36 ಪೈಸೆ‌, ಹಾಲಿನ ದರ ಮೂರು ಬಾರಿ ಹೆಚ್ಚಳ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲೂ ದರ ಏರಿಕೆಯಾಗಿದೆ. ಮುದ್ರಾಂಕ ಶುಲ್ಕ, ಆಫಿಡೆವಿಟ್, ಕ್ಯಾನ್ಸ್​​ಲೇಷನ್ ಡೀಡ್, ಮಾರ್ಟ್​ಗೇಜ್, ವೃತ್ತಿಪರ ತೆರಿಗೆ ಎಲ್ಲವೂ ಏರಿಕೆಯಾಗಿದೆ. ಬಿತ್ತನೆ ಬೀಜ, ಬಸ್ ದರ, ನೀರಿನ ಸುಂಕ ಹಾಗೂ ಪೆಟ್ರೋಲ್ ದರ ಏರಿಕೆಯಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಿ ನೀಡಿದ ಮತದಾರರಿಗೆ ಶಾಪ ನೀಡುವ ಸರ್ಕಾರ ಇದಾಗಿದೆ. ಬಡವರಿಗೆ ಬರೆ ಎಳೆಯುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಏಪ್ರಿಲ್ 2ರಂದು ಫ್ರೀಡಂ ಪಾರ್ಕ್​​ನಲ್ಲಿ ಬೆಳಗ್ಗೆ 11 ಗಂಟೆಗೆ ಅಹೋರಾತ್ರಿ ಧರಣಿ ಆರಂಭಿಸಲಿದ್ದೇವೆ. ಪಕ್ಷದ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಧರಣಿ ಮುಂದುವರಿಕೆಗೆ ಅಂದೇ ತೀರ್ಮಾನಿಸುತ್ತೇವೆ ಎಂದರಲ್ಲದೆ ಏಪ್ರಿಲ್ 5ರಂದು ಜಿಲ್ಲೆ ಹಾಗೂ ಮಂಡಳಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ನಿರಂತರ ಬೆಲೆ ಏರಿಕೆ-
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ
20 ತಿಂಗಳಿಂದ ಬೆಲೆ ಏರಿಕೆ ನಿರಂತರವಾಗಿ ಮಾಡುತ್ತಿದೆ. ಪೆಟ್ರೋಲ್, ಹಾಲು, ಸ್ಟ್ಯಾಂಪ್ ಡ್ಯೂಟಿ, ಮೆಟ್ರೋ, ವಿದ್ಯುತ್ ಎಲ್ಲಾ ದರಗಳು ಹೆಚ್ಚಾಗಿವೆ. ಹಾಲಿನ ದರ 3, 2, 4 ರೂ. ಹೀಗೆ ಮೂರು ಸಲ ಏರಿಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿ ದರ 10 ರೂ., 20 ರೂ. ಮಾಡಿದ್ದಾರೆ. ಜನನ, ಮರಣ ಪ್ರಮಾಣ ಪತ್ರ ಶುಲ್ಕ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗೆ ಹೋಗುವವರಿಗೂ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಮುದ್ರಾಂಕ ಶುಲ್ಕ 500 ರಿಂದ 1,000 ರೂ.ಗೆ ಹೆಚ್ಚಳ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ದರ ಹೆಚ್ಚಳ ಹಿಂಪಡೆಯಬೇಕು ಎಂದು ಆಗ್ರಹಿಸಲಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.

ಜನಾಕ್ರೋಶ ಯಾತ್ರೆ: ಬೆಲೆ ಏರಿಕೆ ಖಂಡಿಸಿ ಅಹೋರಾತ್ರಿ ಧರಣಿ ಮಾಡಿದ ನಂತರ ಎಸ್​ಸಿಎಸ್​ಪಿ-ಟಿಎಸ್​​ಪಿ ಯೋಜನೆಯ ಹಣ ದುರುಪಯೋಗದ ವಿರುದ್ಧ ಹೋರಾಟ ಮಾಡಲಿದ್ದೇವೆ. ಎಸ್​ಸಿಎಸ್​ಪಿ-ಟಿಎಸ್​​ಪಿ ಯೋಜನೆಯ ಹಣ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಹಣ ಬಳಕೆ ಆಗಬೇಕಿತ್ತು. ಆದರೆ ಆಗಿಲ್ಲ, ಇದನ್ನು ಖಂಡಿಸಿ ಬಿಜೆಪಿ ಹೋರಾಟ ನಡೆಸಲಿದೆ. ಎರಡು ವಿಚಾರ ಮುಂದಿಟ್ಟುಕೊಂಡು ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿದರು. ಏಪ್ರಿಲ್ 7ರಂದು ಮೈಸೂರಿನಿಂದ ಹೋರಾಟ ಆರಂಭವಾಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರ ಜೊತೆಗೂ ಚರ್ಚೆ ಮಾಡಿದ್ದೇನೆ‌. ಜನಾಕ್ರೋಶ ಯಾತ್ರೆಗೆ ಏಪ್ರಿಲ್ 7ರಂದು ಚಾಲನೆ ನೀಡಲಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.

ವಿವಿಧ ಹಂತದಲ್ಲಿ ಹೋರಾಟ:
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಬೆಲೆ ಏರಿಕೆ ವಿರುದ್ಧ ನಾಲ್ಕು ಹಂತದಲ್ಲಿ ಬೃಹತ್ ಹೋರಾಟ ಮಾಡಲಿದ್ದೇವೆ‌. ಏಪ್ರಿಲ್​
7ರಂದು ಮೈಸೂರು, ಚಾಮರಾಜನಗರ, ಏ.8ರಂದು ಮಂಡ್ಯ, ಹಾಸನ, ಏ.9ರಂದು ಕೊಡಗು, ಮಂಗಳೂರು ಹಾಗೂ ಏ.10ರಂದು ಉಡುಪಿ, ಚಿಕ್ಕಮಗಳೂರಲ್ಲಿ ಮೊದಲ ಹಂತದ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು.

ಶಿವಮೊಗ್ಗದಿಂದ ಎರಡನೇ ಹಂತದ ಹೋರಾಟ ಆರಂಭವಾಗಲಿದೆ. ಏ.13ರಂದು ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಹೋರಾಟ ನಡೆಸಿ, ಜನಜಾಗೃತಿ ಮಾಡುವ ಕೆಲಸ‌ಮಾಡಲಿದ್ದೇವೆ. ಹೋರಾಟವನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಲ್ಕು ಹಂತದಲ್ಲಿ ಹೋರಾಟ ಮಾಡಲಿದ್ದೇವೆ‌ಎಂದು ವಿಜಯೇಂದ್ರ ಅವರು ವಿವರಿಸಿದರು.

ಹೋರಾಟದ ಸಂದರ್ಭದಲ್ಲೇ ಪ್ರತೀ ನಗರದಲ್ಲಿ 2 ಕಿ.ಮೀ. ಪಾದಯಾತ್ರೆ, ಬಳಿಕ ಸಣ್ಣ ಪ್ರಮಾಣದ ಸಮಾವೇಶ ನಡೆಯಲಿದೆ. ಈ ಹೋರಾಟವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಜೆಡಿಎಸ್ ಬೇರೆಯದೇ ಹೋರಾಟ ಮಾಡುತ್ತಿದೆ. ಈ ಹೋರಾಟದಲ್ಲಿ ಜೆಡಿಎಸ್ ಭಾಗಿಯಾಗಲ್ಲ ಎಂದು ಇದೇ ವೇಳೆ ವಿಜಯೇಂದ್ರ ಸುಳಿವು ನೀಡಿದರು.

ಮುಸ್ಲಿಂ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಸ್ಲಿಂ ಬಜೆಟ್ ಆಗಿದೆ. ಹಿಂದೂಗಳಿಗೆ ಅಪಮಾನ ಮಾಡಿ ಅಲ್ಪಸಂಖ್ಯಾತರ ಓಲೈಕೆ ಮಾಡುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಧರ್ಮಾಧರಿತವಾಗಿ ಸರ್ಕಾರದ ಕಾಮಗಾರಿಯಲ್ಲಿ ಶೇ 4ರಷ್ಟು ಮೀಸಲಾತಿ ನೀಡಿದ್ದಾರೆ. ಇದು ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾದ ನಡೆಯಾಗಿದೆ. ವಿದೇಶಕ್ಕೆ‌ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷದಿಂದ 30 ಲಕ್ಷ ರೂ.ಗೆ ಸ್ಕಾಲರ್​​ಶಿಪ್ ಏರಿಸಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ನೂರಾರು ಕೋಟಿ ರೂ. ಮೀಸಲಿಟ್ಟಿದ್ದಾರೆ. ಇಮಾಂಗಳ ಸಂಬಳ ಕೂಡ ಜಾಸ್ತಿ ಮಾಡಿದ್ದಾರೆ ಎಂದು ವಿಜಯೇಂದ್ರ ದೂರಿದರಲ್ಲದೆ ಬಿಜೆಪಿ ಮುಸ್ಲಿಂ ಸಮುದಾಯದ ವಿರೋಧಿಗಳಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದರು.  ಮುಸ್ಲಿಂ ಅವರೊಬ್ಬರಿಗೆ ಮಾತ್ರ ಯಾಕೆ ಮಾಡುತ್ತಿದ್ದೀರಾ ಅನ್ನೋದೇ ನಮ್ಮ ಪ್ರಶ್ನೆ. ಪ್ರಧಾನಿ ಮೋದಿ ಎಲ್ಲ ಜಾತಿ, ಧರ್ಮದವರಿಗೂ ಎಲ್ಲ ಯೋಜನೆ ತಲುಪಿಸುತ್ತಿದ್ದಾರೆ. ಅದೇ ರೀತಿ ಇಲ್ಲೂ ಆಗಬೇಕು. ಸಿದ್ದರಾಮಯ್ಯ ಅವರದ್ದು ಮುಸ್ಲಿಂ ಬಜೆಟ್ ಆಗಿದೆ ಎಂದು ವಿಜಯೇಂದ್ರ ಹರಿಹಾಯ್ದರು.

ಸಮಿತಿಗಳ ಸಭೆಗೆ ಹೋಗಲ್ಲ:
ವಿಧಾನಸಭಾಧ್ಯಕ್ಷರು ಬಿಜೆಪಿಯ
18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು. ಆದೇಶ ಹಿಂತೆಗೆದುಕೊಳ್ಳುವವರೆಗೂ ನಮ್ಮ ಯಾವುದೇ ಶಾಸಕರು ರಾಜ್ಯ ಸರ್ಕಾರದ ವಿವಿಧ ಸಮಿತಿಗಳಮೀಟಿಂಗ್​ನಲ್ಲಿ ಭಾಗಿಯಾಗಲ್ಲ. ಶಾಸಕರ ಅಮಾನತು ಮಾಡಿರುವುದನ್ನು ಖಂಡಿಸಿ ಏಪ್ರಿಲ್​​​ 2ರಂದು ಬೆಳಗ್ಗೆ 10 ಗಂಟೆಗೆ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತಿದ್ದೇವೆ. ಬಳಿಕ ಸ್ಪೀಕರ್​​ಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ಬಿ.ಎ ಬಸವರಾಜ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಮುನಿರತ್ನ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಎನ್.ರವಿಕುಮಾರ್, ಸಂಸದರಾದ ಕ್ಯಾಪ್ಟನ್‌ಬ್ರಿಜೇಶ್‌ಚೌಟ, ಶಾಸಕರಾದ ಎಸ್.‌ಆರ್.‌ವಿಶ್ವನಾಥ್‌, ಕೃಷ್ಣಪ್ಪ, ಬಸವರಾಜ ಮತ್ತೀಮಡು, ಜಿಲ್ಲಾಧ್ಯಕ್ಷರಾದ ಸಿ. ಕೆ. ರಾಮಮೂರ್ತಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ. ಎಸ್.‌ಪಾಟೀಲ್‌ನಡಹಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

 

Share This Article
error: Content is protected !!
";