ರೌಡಿ ಶೀಟರ್ ಶಿವಪ್ರಕಾಶ್ ಹತ್ಯೆ ಸಂಬಂಧ ತನಿಖಾಧಿಕಾರಿಗಳ ಮುಂದೆ ಹಾಜರಾದ ಬಿಜೆಪಿ ಶಾಸಕ ಬೈರತಿ ಬಸವರಾಜ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೌಡಿ ಶೀಟರ್ ಶಿವಪ್ರಕಾಶ್ ಆಲಿಯಾಸ್ ಬಿಕ್ಲು ಶಿವ ಹತ್ಯೆ ಆರೋಪ ಪ್ರಕರಣದ ಐದನೇ ಆರೋಪಿಯಾಗಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರು ಎರಡನೇ ಬಾರಿಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು. ಪ್ರಕರಣದ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ಅವರ ಮುಂದೆ ಶಾಸಕರು ಹಾಜರಾಗಿ ಸುಮಾರು
3 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ನೆರವು ನೀಡಿದ ಆರೋಪದಡಿ ಆಟೋ ಚಾಲಕ ಶಿವು ಎಂಬಾತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೂ ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement - 

ವಿಚಾರಣೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬೈರತಿ ಬಸವರಾಜ್, ತನಿಖಾಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೊಮ್ಮೆ ವಿಚಾರಣೆಗೆ ಬರುವಂತೆ ದಿನಾಂಕ ನಿಗದಿಪಡಿಸದೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ ಎಂದರು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಯಾರೆಂಬುದು ನನಗೆ ಗೊತ್ತಿಲ್ಲ.

ಸಾಕಷ್ಟು ಜನರು ಬಂದು ನನ್ನ ಜೊತೆ ಫೋಟೊ ತೆಗೆಸಿಕೊಳ್ಳುತ್ತಾರೆ. ಕೊಲೆಯಾದ ಶಿವಪ್ರಕಾಶ್ ಆಗಲಿ, ಜಮೀನು ವಿಚಾರಗಳಾಗಲಿ ನನಗೆ ಗೊತ್ತಿಲ್ಲ. ಒಂದು ವೇಳೆ ಸಮಸ್ಯೆಯಿದ್ದಿದ್ದರೆ ಅವನು ನಮ್ಮ ಮನೆ ಬಳಿ ಬಂದು ಕೇಳಬೇಕಿತ್ತು ಎಂದು ಹೇಳಿದರು.

- Advertisement - 

ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತ. ನಾನೊಬ್ಬ ಪ್ರಾಮಾಣಿಕ ರಾಜಕಾರಣಿ. ಇದರ ಹಿಂದೆ ಕಾಣದ ಕೈಗಳಿವೆ. ದುರುದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸುವ ಯತ್ನ ಮಾಡಿದ್ದಾರೆ. ಏನೇ ಮಾಡಿದರೂ ಕಾನೂನು ರೀತಿ ಎದುರಿಸುವ ಶಕ್ತಿ ನನಗಿದೆ ಎಂದು ಅವರು ತಿಳಿಸಿದರು.

 

 

Share This Article
error: Content is protected !!
";