ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ರಾಜ್ಯದಲ್ಲಿ ನಡೆಯುತ್ತಿರುವ ರಸಗೊಬ್ಬರ ಕಳ್ಳ ದಂಧೆಗೆ ಸರ್ಕಾರವೇ ನೇರ ಹೊಣೆಯಾಗಿದ್ದು ಇದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.
ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ರೈತ ಸಮಸ್ಯೆಗಳ ಕುರಿತು ಗಂಭೀರತೆ ಇಲ್ಲ, ಕಾಳಜಿ ಇಲ್ಲ. ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ದಾಸ್ತಾನು ಇಡುತ್ತಿದ್ರು, ಅದಕ್ಕೆ ಅನುದಾನ ಕೂಡ ಇಡುತ್ತಿದ್ರು. ಈ ಸರ್ಕಾರ ದಾಸ್ತಾನು ಅನುದಾನ ಕೂಡ ಕಡಿತ ಮಾಡಿದೆ ಎಂದು ಅವರು ಆರೋಪಿಸಿದರು.
ಮುಂಗಾರು ಮಳೆ ಸಂದರ್ಭದಲ್ಲಿ ಸಾವಿರ ಕೋಟಿ ರೂಪಾಯಿ ಅನುದಾನಕ್ಕೆ ಬದಲಿಗೆ 400 ಕೋಟಿ ರೂಪಾಯಿಗೆ ಇಳಿಸಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಟೀಕಿಸಿದರು.
ಗೊಬ್ಬರ ದಾಸ್ತಾನನ್ನು ಮುಂಚೆಯೇ ಸಂಗ್ರಹ ಮಾಡಿಕೊಂಡಿಲ್ಲ, ಮುಂಚೆಯೇ ಕೇಂದ್ರಕ್ಕೆ ಪತ್ರ ಬರೆಯಬೇಕಿತ್ತು, ಈಗ ಪತ್ರ ಬರೆಯೋದಲ್ಲ. ರೈತರನ್ನು ಈ ಸರ್ಕಾರ ಬೀದಿಗೆ ತಂದಿದೆ. ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದೆ. ಕೇಂದ್ರದ ರೈತ ವಿದ್ಯಾನಿಧಿ ನಿಲ್ಲಿಸಿದೆ. ಕೃಷಿ ಪಂಪಸೆಟ್ ಸಬ್ಸಿಡಿ ಇಳಿಸಿದೆ. ರೈತರಿಗೆ ಸಹಕಾರ ಕೊಡದೇ ಸರ್ಕಾರ ಕೈಚೆಲ್ಲಿ ಕೂತಿದೆ. ಕೇಂದ್ರದಿಂದ 8 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಂದಿದೆ, ಏನಾಯ್ತು ಅದು ಎಂದು ವಿಜಯೇಂದ್ರ ಪ್ರಶ್ನಿಸಿದರು.
ರಸಗೊಬ್ಬರ ಅಭಾವ, ಯಾರು ಕಳ್ಳಸಾಗಣೆ ಮಾಡ್ತಿದ್ದಾರೆ?. ಇದನ್ನು ಪತ್ತೆ ಹಚ್ಚಿ ಸರ್ಕಾರ ಕ್ರಮ ತಗೋಬೇಕು. ರಸಗೊಬ್ಬರ ಕಳ್ಳದಂಧೆಗೆ ಬ್ರೋಕರ್ಗಳು ಕಾರಣ. ಬ್ರೋಕರ್ಗಳಿಗೆ ಸಹಕಾರ ಕೊಡುವ ಕೆಲಸ ಸರ್ಕಾರದಲ್ಲಿ ಆಗ್ತಿದೆ. ಸೋಮವಾರ ರಾಜ್ಯಾದ್ಯಂತ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ. ರಸಗೊಬ್ಬರ ಅಭಾವ ವಿರೋಧಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಯಲಿದೆ ಎಂದರು.

