ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯೂರು ಶಾಖೆ ವತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಹಿರಿಯೂರು ತಾಲ್ಲೂಕು ಬಿಜೆಪಿ ಪಕ್ಷದಿಂದ ಬೆಂಬಲ ಸೂಚಿಸಿ ಮುಷ್ಕರದಲ್ಲಿ ಭಾಗವಹಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಅಭಿನಂದನ್.ಕೆ. “ವಿ.ವಿ.ಸಾಗರದಿಂದ ತಾಲ್ಲೂಕಿನ ಜೆ.ಜೆ.ಹಳ್ಳಿ ಮತ್ತು ಕಲ್ವಳ್ಳಿ ಭಾಗದ 16 ಕೆರೆಗಳಿಗೆ ಹಾಗೂ ಕಸಬಾ, ಐಮಂಗಲ ಹೋಬಳಿಯ 6 ಕೆರೆಗಳಿಗೆ ನೀರು ತುಂಬಿಸುವ ಹೋರಾಟ 250 ದಿನಗಳು ತುಂಬಿದರೂ ತಾಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರೈತರಿಗೆ ಸ್ಪಂದಿಸದೇ ಇರುವುದು ಅವರಿಗಿರುವ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತದೆ ಎಂದು ದೂರಿದರು.
ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ತಮ್ಮ ಕ್ಷೇತ್ರದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಸುಧಾಕರ್ ರವರು “ಶೂನ್ಯ ಸರ್ಕಾರದಲ್ಲಿನ ಶೂನ್ಯ ಸಚಿವರಾಗಿದ್ದಾರೆ” ಎಂದು ಟೀಕಿಸಿದರು.
ರೈತ ನಾಯಕ, ಭಗೀರಥ ಎಂದು ಸ್ವಯಂ ಘೋಷಿತ ನಾಯಕನಾದರೆ ಸಾಲದು ನಿಮಗೇನಾದರೂ ನೈತಿಕತೆ ಇದ್ದರೆ ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸಿ ಇಲ್ಲವೇ ರಾಜೀನಾಮೆ ನೀಡಿ ಮನೆ ನಡೆಯಿರಿ ಎಂದು ಆಗ್ರಹಿಸಿದರು.
“ಶಾಸಕ, ಸಚಿವ ಸ್ಥಾನ ಕೇವಲ ವ್ಯಾಪಾರ ಎಂದುಕೊಂಡಿರುವ ತಮಗೆ ರೈತರ ಬೇಡಿಕೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ತಮಗೆ ಸಮಯ ಇಲ್ಲ, ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿರುವ ರೈತರಿಗೆ ಏನಾದರೂ ಅನಾಹುತ ಆದರೆ ನೀವೇ ಹೊಣೆ ಹೊರಬೇಕು ಎಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ರೈತರು ನಡೆಸುವ ಎಲ್ಲಾ ಹೋರಾಟಗಳಿಗೆ ಬಿಜೆಪಿ ಪಕ್ಷ ಬೆಂಬಲಕ್ಕೆ ನಿಲ್ಲಲಿದ್ದು, ನಿಮ್ಮ ನಿರ್ಲಕ್ಷ್ಯ ಧೋರಣೆಗೆ ಹೇಗೆ ಇತಿಶ್ರೀ ಹಾಡಬೇಕು ಎಂದು ಜನರೊಂದಿಗೆ ಹೋರಾಟ ರೂಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಪ್ಪ ನಾಯಕ, ನಗರ ಸಭೆ ಮಾಜಿ ಸದಸ್ಯ ಕೇಶವ ಮೂರ್ತಿ, ಹಾಲಪ್ಪ, ಗೋವಿಂದಪ್ಪ, ಮುರುಳಿ, ಯುವ ಮುಖಂಡರಾದ ಮುರುಳಿಧರ AMS, ಯೋಗೇಶ್, ಗೋವಿಂದಪ್ಪ, ಕೆ ಟಿ ಹನುಮಂತು, ತಿಪ್ಪಣ್ಣ, ಶಿವು, ವಿಷ್ಣು, ರಾಕೇಶ್, ವಾಸು ಇತರರು ಇದ್ದರು.