ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಲಭೆ ಸೃಷ್ಟಿ, ಕೊಲೆಗಡುಕ ಸಂಸ್ಕೃತಿ, ಸಮಾಜವನ್ನು ಒಡೆದಾಳುವುದು, ಹೆಣದ ಮೇಲಿನ ರಾಜಕಾರಣವೇ ಬಿಜೆಪಿ ಬಂಡವಾಳ! ಎಂದು ಕಾಂಗ್ರೆಸ್ ಟೀಕಿಸಿದೆ.
ಕಳೆದ ಎರಡು ವರ್ಷದಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 500ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಆಸ್ತಿ ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ತಾಣದಲ್ಲೇ ಹತ್ಯೆಗಳಾಗಿವೆ.
ಇಷ್ಟೆಲ್ಲಾ ಅನಾಹುತ, ಸಾವು ನೋವುಗಳು ಸಂಭವಿಸಿದರೂ ಈವರೆಗೂ ಪ್ರಧಾನಿಯಾಗಲೀ, ಗೃಹ ಸಚಿವರಾಗಲೀ, ಅಥವಾ ರಕ್ಷಣಾ ಸಚಿವರಾಗಲೀ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ದೂರಿದೆ.
ಈಗ ಈ ಎಲ್ಲವೂ ಮಣಿಪುರದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಅವರ ಆಣತಿಯಂತೆಯೇ ನಡೆದಿದೆ ಎಂಬ ಆಘಾತಕಾರಿ ಸಂಗತಿ ಬಹಿರಂಗಗೊಂಡು ಸುಪ್ರೀಂ ಕೋರ್ಟ್ ತನಿಖೆಗೆ ಆದೇಶ ನೀಡಿದೆ. ಅನಿವಾರ್ಯವಾಗಿ ಮಣಿಪುರದ ಸಿಎಂ ರಾಜೀನಾಮೆ ನೀಡಿದ್ದಾರೆ. ಉರಿವ ಮನೆಗಳ ಎಣಿಸುವ ಚಾಳಿ ಬಿಜೆಪಿಗೆ ರಕ್ತಗತ!ವಾಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.

