ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಬಿಜೆಪಿ ಮುಖಂಡ, ನಗರಸಭೆ ಸದಸ್ಯ ರಮೇಶ್ ರೈ ಅವರು ಗುರುವಾರ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಹುಟ್ಟಿಕೊಂಡಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಬಿಜೆಪಿ ಸದಸ್ಯರಾಗಿದ್ದ ರಮೇಶ್ ರೈ ಅವರು ಮನೆಯಿಂದ ಇತ್ತೀಚೆಗೆ ನಾಪತ್ತೆಯಾಗಿದ್ದರು. ಬಳಿಕ ಪಾಣೆ ಮಂಗಳೂರು ಸೇತುವೆಯ ಬಳಿ ರಮೇಶ್ ರೈ ಅವರ ಮೊಬೈಲ್ ಮತ್ತು ಬೈಕ್ ಪತ್ತೆಯಾಗಿತ್ತು.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಮಂಗಳೂರಿನ ಸೇತುವೆ ಬಳಿ ಅವರ ಮೃತದೇಹ ಪತ್ತೆಯಾಗಿದೆ.
ಪುತ್ತೂರು ನಗರಸಭೆಯ ನೆಲ್ಲಿಕಟ್ಟೆ ವಾರ್ಡ್ ಸದಸ್ಯರಾಗಿದ್ದ ರಮೇಶ್ ರೈ ಅವರು ಇತ್ತೀಚಿಗೆ ನಗರಸಭೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.