ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜರ್ಮನಿಯ ಫೆಡರಲ್ ಚಾನ್ಸಲರ್ ರಾಜ್ಯ ಭೇಟಿ: ಖಾಸಗಿ ಕಾರ್ಯಕ್ರಮಕ್ಕೂ ಬಿಜೆಪಿಯ ರಾಜಕೀಯ ನಾಚಿಕೆಗೇಡಿತನ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ.
ಜರ್ಮನಿಯ ಫೆಡರಲ್ ಚಾನ್ಸಲರ್ ಫ್ರಿಡ್ರಿಕ್ ಮೆರ್ಝ್ ಅವರ ರಾಜ್ಯ ಭೇಟಿ ಸಂಪೂರ್ಣವಾಗಿ ಖಾಸಗಿ ಹಾಗೂ ಪೂರ್ವನಿಗದಿಯಾಗಿತ್ತು. ಜರ್ಮನಿ ಮೂಲದ ಬಾಷ್ (Bosch) ಕಂಪೆನಿ ಮತ್ತು ಐಐಎಸ್‌ಸಿ (IISc)ಗೆ ಭೇಟಿ ನೀಡುವುದಷ್ಟೇ ಅವರ ಉದ್ದೇಶವಾಗಿತ್ತು. ರಾಜ್ಯ ಸರ್ಕಾರದೊಂದಿಗೆ ಯಾವುದೇ ಅಧಿಕೃತ ಸಭೆ, ಮಾತುಕತೆಗಳೇ ಇರಲಿಲ್ಲ! ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಅಧಿಕೃತ ಕಾರ್ಯಕ್ರಮಗಳೇ ಇಲ್ಲದಿದ್ದಾಗ ಮುಖ್ಯಮಂತ್ರಿ ಅವರ ಹಾಜರಾತಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂತಹ ಕಾರ್ಯಕ್ರಮಗಳು ಇದ್ದಿದ್ದರೆ, ಮುಖ್ಯಮಂತ್ರಿಗಳೇ ಸ್ವತಃ ಅವರನ್ನು ಸ್ವಾಗತಿಸುತ್ತಿದ್ದರು ಎಂಬ ಸತ್ಯವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ ಎಂದು ಸಚಿವರು ದೂರಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ, ಸರ್ಕಾರದ ಪರವಾಗಿ ಶಿಷ್ಟಾಚಾರದಂತೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಸ್ವಾಗತ-ಬೀಳ್ಕೊಡುಗೆ ನೆರವೇರಿಸಲಾಯಿತು.
ಅಂತಾರಾಷ್ಟ್ರೀಯ ಅತಿಥಿಯೊಬ್ಬರು ಖಾಸಗಿ ಭೇಟಿಯನ್ನೂ ರಾಜಕೀಯ ಲಾಭಕ್ಕಾಗಿ ಬಳಸಲು ಯತ್ನಿಸುವ ಬಿಜೆಪಿಯ ನಡೆ ಖಂಡನೀಯ. ರಾಜ್ಯದ ಗೌರವದ ವಿಚಾರದಲ್ಲಿ ರಾಜಕೀಯ ಮಾಡುವುದು ನಾಚಿಕೆಗೇಡಿತನ. ಕರ್ನಾಟಕ ಇದನ್ನು ಒಪ್ಪುವುದಿಲ್ಲ! ಎಂದು ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.

